‘ಹರಿಕಥೆ ಮನಸ್ಸಿನ ದುಗುಡ, ದುಮ್ಮಾನ ದೂರಮಾಡುವ ಮಾಧ್ಯಮ’

Update: 2019-07-17 15:50 GMT

ಉಡುಪಿ, ಜು. 17: ಹರಿಕಥೆ ಎಂಬುದು ನಮ್ಮ ಮನಸ್ಸಿನ ಅಹಂಕಾರ, ಅಹಂಭಾವ, ದುಗುಡ, ದುಮ್ಮಾನ ದೂರ ಮಾಡಿ, ಭಗವಂತನ ಕಥೆ, ಉಪಕಥೆ ಗಳಿಂದ ಮನಸ್ಸಿಗೆ ನೆಮ್ಮದಿ, ಶಾಂತಿಯನ್ನು ನೀಡುವ ಮಾಧ್ಯಮವಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಹೇಳಿದ್ದಾರೆ.

ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಮಂಗಳೂರಿನ ಹರಿಕಥಾ ಪರಿಷತ್ತು, ಬೆಂಗಳೂರಿನ ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಹಾಗೂ ಕಾರ್ಕಳದ ಶ್ರೀಹಂಡೆದಾಸ ಪ್ರತಿಷ್ಠಾನಗಳ ಸಂಯುಕ್ತ ಸಹಯೋಗದಲ್ಲಿ ಶ್ರೀಕೃಷ್ಣ ಮಠದ ಮಧ್ವಮಂಟಪದಲ್ಲಿ ಆಯೋಜಿಸಲಾಗಿರುವ ‘60ದಿನಗಳ ಹರಿಕಥಾ ಜ್ಞಾನಯಜ್ಞ’ಕ್ಕೆ ಬುಧವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.

ಮನುಷ್ಯ ನಿರಂತರವಾಗಿ ಹರಿಕಥೆ ಕೇಳಿದಾಗ ಮನಸ್ಸಿನಲ್ಲಿ ಅಡಗಿದ ಅಹಂ ಭಾವನೆ ದೂರವಾಗುತ್ತದೆ. ಭಗವಂತ ಹೇಗೆ ಭಕ್ತನಿಗೆ ಬೇಡವಾಗಿರುವುದನ್ನು ಹಿಂಪಡೆದು ಬೇಕಾಗಿರುವುದನ್ನು ನೀಡುತ್ತಾನೊ, ಹಾಗೆಯೇ ಹರಿಕಥೆ ಮನಸ್ಸಿನ ಅಶಾಂತಿಯನ್ನು ಹೋಗಲಾಡಿಸಿ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದರು.

ಪರ್ಯಾಯ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀ ವಿದ್ಯಾ ರಾಜೇಶ್ವರತೀರ್ಥ ಶ್ರೀಪಾದರು ಮಾತನಾಡಿ, ಹರಿಕಥೆ ಕೇವಲ ಮನೋರಂಜನೆಗೆ ಸಿಮೀತವಾಗಿಲ್ಲ, ಇದು ಪೌರಾಣಿಕ ವಿಷಯವನ್ನು ಸ್ವಾರಸ್ಯಕರವಾಗಿ ತಿಳಿಸುತ್ತದೆ ಎಂದರು.

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಮಂಗಳೂರು ಹರಿಕಥಾ ಪರಿಷತ್ತು ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷ ಮಹಾಬಲ ಶೆಟ್ಟಿ, ಕಾರ್ಕಳ ಶ್ರೀಹಂಡೆದಾಸ ಪ್ರತಿಷ್ಠಾನದ ರುಕ್ಮಿಣಿ ಹಂಡೆ, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಜಿಎಂ ದೇವಾನಂದ ಉಪಾಧ್ಯಾಯ ಉಪಸ್ಥಿತರಿದ್ದರು.

ಹರಿಕಥಾ ಪರಿಷತ್ತಿನ ಉಡುಪಿ ಜಿಲ್ಲಾ ಸಂಚಾಲಕ ವೈ. ಅನಂತಪದ್ಮನಾಭ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಹರಿಕಥಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್ ವಂದಿಸಿದರು.

ಮೊದಲ ದಿನ ಕುಂಬ್ಳೆಯ ಶಂ.ನಾ.ಅಡಿಗ ಅವರು ‘ಭೀಷ್ಮ ಭಕ್ತಿ’ ಹರಿಕಥೆ ಪ್ರಸ್ತುತ ಪಡಿಸಿದರು. ಎರಡು ತಿಂಗಳ ಕಾಲ ನಡೆಯುವ ಹರಿಕಥಾ ಜ್ಞಾನಯಜ್ಞ ದಲ್ಲಿ ನಾಡಿನ ಒಟ್ಟು 60 ಮಂದಿ ಹರಿಕಥಾಕೀರ್ತನಕಾರರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News