ಆ. 1ರಿಂದ ‘ಮತ್ತೆ ಕಲ್ಯಾಣ’ ರಾಜ್ಯವ್ಯಾಪ್ತಿ ಆಂದೋಲನ

Update: 2019-07-17 16:00 GMT

ಮಂಗಳೂರು, ಜು.17: ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ ಸಾರಥ್ಯದಲ್ಲಿ ಆಗಸ್ಟ್ 1ರಿಂದ 30ರವರೆಗೆ ಸಹಮತ ವೇದಿಕೆಯಿಂದ ‘ಮತ್ತೆ ಕಲ್ಯಾಣ’ ರಾಜ್ಯವ್ಯಾಪಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಆಂದೋಲನದ ಭಾಗವಾಗಿ ಆ.3ರಂದು ಮಂಗಳೂರಿನಲ್ಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಮತ್ತೆ ಕಲ್ಯಾಣ’ ಅಭಿಯಾನದ ಜಿಲ್ಲಾ ಸಮಿತಿಯ ಸಂಯೋಜಕ ಉಮರ್ ಯು.ಎಚ್., ನಾಡಿನ ಪ್ರಮುಖ ಜನಪರ ಸ್ವಾಮೀಜಿಗಳು, ಚಿಂತಕರು, ಪ್ರಗತಿಪರರು, ಸಾಹಿತಿಗಳು, ಕಲಾವಿದರು ಹಾಗೂ ಸಂಘಕರನ್ನೊಳಗೊಂಡ ಸಲಹಾ ಸಮಿತಿಯಿಂದ ಆಂದೋಲನ ನಡೆಯಲಿದೆ ಎಂದರು.

12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಶರಣರ ಸಾಹಿತ್ಯಿಕ, ಧಾರ್ಮಿಕ, ಸಾಮಾಜಿಕ ಮತ್ತು ವೈಚಾರಿಕ ಕ್ರಾಂತಿ ಜಗತ್ಪ್ರಸಿದ್ಧವಾಗಿದೆ. ಆ ಕಾಲದಲ್ಲಿ ಬಸವಣ್ಣನವರು ನೇತೃತ್ವದಲ್ಲಿ ಉತ್ತರ ಕರ್ನಾಟಕದ ಕಲ್ಯಾಣ (ಇಂದಿನ ಬಸವಕಲ್ಯಾಣ) ಎಂಬಲ್ಲಿ ಕ್ರಾಂತಿ ನಡೆದ ಕ್ರಾಂತಿಯಲ್ಲಿ ಎಲ್ಲ ಜಾತಿ, ಮತ, ಧರ್ಮಗಳ ಜನ ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ಭಾಗವಹಿಸಿದ್ದರು. ಭಾರತದ ಮೂಲೆಮೂಲೆಯಿಂದ ನಡೆದುಬಂದು ಕಲ್ಯಾಣದಲ್ಲಿ ಸೇರಿ ಲೋಕಚಿಂತನೆ ನಡೆಸಿದ್ದರು ಎಂದು ಹೇಳಿದರು.

ಅಂದಿನ ಆ ಕಲ್ಯಾಣದ ಕ್ರಾಂತಿಯನ್ನು ವರ್ತಮಾನದಲ್ಲಿ ನೆನಪಿಸಿಕೊಂಡು ಇಂದಿನ ಜನಾಂಗ ಜಾತಿ, ಮತ, ಧರ್ಮ, ಲಿಂಗ, ಬಡವ-ಬಲ್ಲಿದ ಎಂಬ ಯಾವ ಭೇದವೂ ಇಲ್ಲದೆ ಒಂದೆಡೆ ಸೇರಬೇಕು. ಭಾರತದ ಸರ್ವತೋಮುಖ ಅಭ್ಯುದಯದ ಬಗೆಗೆ ಚಿಂತಿಸುವುದು. ಸಾಮರಸ್ಯದ ನಡಿಗೆಯಿಂದ ನಾವೆಲ್ಲ ಒಂದೇ ಎಂಬುದನ್ನು ಸಾರುವುದು. ‘ದಾಸೋಹ’ ಮೂಲತತ್ವ ಪ್ರತಿಪಾದಿಸುವುದು ‘ಮತ್ತೆ ಕಲ್ಯಾಣ’ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.

ಆ.1ರಿಂದ 30ರವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ನಡೆಯಲಿದೆ. ಚಿಕ್ಕಮಗಳೂರು-ತರೀಕೆರೆಯಲ್ಲಿ ಆಂದೋಲನಕ್ಕೆ ಚಾಲನೆ ದೊರೆಯಲಿದೆ. ಆ.2ರಂದು ಉಡುಪಿ ಹಾಗೂ ಆ.3ರಂದು ಮಂಗಳೂರು ನಗರದ ಪುರಭವನದಲ್ಲಿ ಆಂದೋಲನ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ‘ವಚನಗಳು ಮತ್ತು ಸಹಬಾಳ್ವೆ’ ವಿಷಯದಲ್ಲಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ, ಸಾಮರಸ್ಯದ ನಡಿಗೆ, ಸಾರ್ವಜನಿಕ ಸಮಾವೇಶ ಮತ್ತು ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಉಮರ್ ಯು.ಎಚ್. ಮಾಹಿತಿ ನೀಡಿದರು.

ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಭರದ ಸಿದ್ಧತೆ ನಡೆದಿದೆ. ಪ್ರೊ.ಕೆ.ಎಸ್.ಜಯಪ್ಪ ಮತ್ತು ಉಮರ್ ಯು.ಎಚ್. ಸಮಿತಿ ಸಂಚಾಲಕರಾಗಿದ್ದಾರೆ. ಡಾ.ಸತ್ಯನಾರಾಯಣ ಮಲ್ಲಿಪಟ್ಣ, ಜಿ.ವಿ.ರಾಜಶೇಖರ್, ಅನಿಲ್ ಲೊಬೊ, ಉಮೇಶ್ ಎಂ. ಸಾಲ್ಯಾನ್, ಬಿ.ಸಿ.ಮಂಜುನಾಥ, ಡಾ.ಪ್ರವೀಣ್ ಬಿ.ಎಂ., ಮುಹಮ್ಮದ್ ಕುಂಞಿ, ಡಾ.ರಾಜಾರಾಂ ತೋಲ್ಪಾಡಿ, ಎಚ್.ಎಸ್. ಗುರುಮೂರ್ತಿ, ನಿರ್ಮಲಾ ಚಂದ್ರಶೇಖರ್, ಸುಮಾ ಮಾನ್ವಿ, ಎಚ್.ಎಂ.ಸೋಮಶೇಖರಪ್ಪ, ತಾರಾನಾಥ ಗಟ್ಟಿ ಕಾಪಿಕಾಡ್, ಡಾ.ಮೀನಾಕ್ಷಿ ರಾಮಚಂದ್ರ, ಎಚ್. ಗುರುಬಸವರಾಜು ಸೇರಿದಂತೆ ಜಿಲ್ಲೆಯ 60ಕ್ಕೂ ಹೆಚ್ಚು ಮಂದಿ ಜಿಲ್ಲಾ ಸಮಿತಿಯಲ್ಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಹಮತ ವೇದಿಕೆಯ ಜಿಲ್ಲಾ ಸಮಿತಿ ಸಂಚಾಲಕ ಪ್ರೊ.ಕೆೆ.ಎಸ್.ಜಯಪ್ಪ, ಸದಸ್ಯರಾದ ಜಿ.ವಿ.ರಾಜಶೇಖರ್, ತಾರಾನಾಥ ಗಟ್ಟಿ ಕಾಪಿಕಾಡ್, ಬಿ.ಸಿ.ಮಂಜುನಾಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News