ಹಣ ಪಡೆದು ಅಕ್ರಮ ಗೋ ಸಾಗಾಟಕ್ಕೆ ಅನುವು ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಸೆರೆ

Update: 2019-07-17 16:06 GMT

ಕೋಟ, ಜು.17: ಹಣ ಪಡೆದು ಅಕ್ರಮ ಜಾನುವಾರು ಸಾಗಾಟ ಮತ್ತು ಕಳವಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕೋಟ ಪೊಲೀಸರು ಜು.16ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕುಮಟಾದ ವಿನೋದ್(37) ಹಾಗೂ ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ಹೆಡ್‌ಕಾನ್‌ಸ್ಟೇಬಲ್ ಬ್ರಹ್ಮಾವರದ ಸಂತೋಷ್ (37) ಬಂಧಿತ ಆರೋಪಿಗಳು.

ಈ ಪ್ರಕರಣದಲ್ಲಿ ಕೋಟ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಘವೇಂದ್ರ, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಹಾಯಕ ಉಪ ನಿರೀಕ್ಷಕ ಬಾಲಸುಬ್ರಹ್ಮಣ್ಯ, ಹೆಡ್‌ಕಾನ್ಟೇಬಲ್ ಪ್ರಶಾಂತ್, ಕಾನ್‌ಸ್ಟೇಬಲ್ ಚಂದ್ರಶೇಖರ್ ಎಂಬವರು ಕೂಡ ಆರೋಪಿಗಳಾಗಿದ್ದಾರೆ. ಇವರೆಲ್ಲ ತಲೆ ಮರೆಸಿಕೊಂಡಿದ್ದು, ಇನ್ನಷ್ಟೇ ಬಂಧನವಾಗಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂದಾಪುರ ಕಡೆಯಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಜು.12ರಂದು ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ಗೇಟ್ ಬಳಿ ಶಿವಾನಂದ, ಮಾರುತಿ ನಾರಾಯಣ ನಾಯ್ಕ, ಸೈನುದ್ದೀನ್, ಗಣೇಶನ್, ಹಮೀದ್ ಸಿ.ಎಚ್., ಸಮೀರ್‌ರನ್ನು ಬಂಧಿಸಿ, 13 ಕೋಣ, ಆರು ಎಮ್ಮೆ ಮತ್ತು ಲಾರಿಯನ್ನು ವಶಪಡಿಸಿಕೊಂಡಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು.

ವಿಚಾರಣೆ ವೇಳೆ ಬಂಧಿತರು, ಈ ಎಲ್ಲ ಪೊಲೀಸ್ ಸಿಬ್ಬಂದಿ ಹಣ ಪಡೆದು ಅಕ್ರಮ ಜಾನುವಾರು ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದರು ಎಂಬುದಾಗಿ ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನಾಲ್ವರಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸಂಬಂಧ ಜು.16ರಂದು ರಾತ್ರಿ ವೇಳೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಕೋಟ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಧಿತರನ್ನು ಇಂದು ಸಂಜೆ ವೇಳೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇವರನ್ನು ಜು.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಬಂಧಿತರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ 109, 119, 213 ಜೊತೆ 34 ಐಪಿಸಿ ಕಾಯಿದೆಯಡಿ ಪ್ರಕಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News