ಮ.ಪ್ರದೇಶ: ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಮಸೂದೆ ಮಂಡನೆ

Update: 2019-07-17 16:26 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜು.17: ಗೋವುಗಳ ರಕ್ಷಣೆಯ ಹೆಸರಲ್ಲಿ ನಡೆಯುವ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರಕಾರ ಬುಧವಾರ ವಿಧಾನಸಭೆಯಲ್ಲಿ ಗೋರಕ್ಷಣೆ ಮಸೂದೆಯನ್ನು ಮಂಡಿಸಿದೆ. ಗೋವುಗಳ ಹತ್ಯೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸಿ ಹಲ್ಲೆ ಮಾಡುವವರಿಗೆ ಆರು ತಿಂಗಳಿಂದ ಮೂರು ವರ್ಷ ಅವಧಿಯ ಜೈಲುಶಿಕ್ಷೆ ಹಾಗೂ 25 ಸಾವಿರ ರೂ.ನಿಂದ 50 ಸಾವಿರ ರೂ.ವರೆಗಿನ ದಂಡ ವಿಧಿಸುವ ಪ್ರಸ್ತಾವನೆಯನ್ನು ಮಸೂದೆ ಹೊಂದಿದೆ.

ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಮಧ್ಯಪ್ರದೇಶ ಗೋವಂಶ ವಧೆ ನಿಷೇಧ ಅಧಿನಿಯಮ 2004ಕ್ಕೆ ತಿದ್ದುಪಡಿ ತಂದು ಈ ಮೇಲೆ ತಿಳಿಸಲಾದ ಅಂಶವನ್ನು ಸೇರ್ಪಡೆಗೊಳಿಸುವ ತಿದ್ದುಪಡಿ ಮಸೂದೆಯನ್ನು ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ಗೋರಕ್ಷಣೆ ಹೆಸರಲ್ಲಿ ಗುಂಪು ದಾಳಿ ನಡೆದರೆ ಆಗ ಶಿಕ್ಷೆಯ ಅವಧಿಯನ್ನು ಕನಿಷ್ಠ 1 ವರ್ಷ ಮತ್ತು ಗರಿಷ್ಠ 5 ವರ್ಷ ಎಂದು ಮಾರ್ಪಾಡು ಮಾಡಲಾಗುವುದು. ಪುನರಾವರ್ತಿತ ಅಪರಾಧಕ್ಕೆ ಶಿಕ್ಷೆಯ ಅವಧಿ ದ್ವಿಗುಣವಾಗುತ್ತದೆ ಎಂದು ಪಶು ಸಂಗೋಪನೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಶ್ರೀವಾಸ್ತವ ಹೇಳಿದ್ದಾರೆ.

ಗೋರಕ್ಷಣೆಯ ನೆಪದಲ್ಲಿ ಹಿಂಸಾಚಾರಕ್ಕೆ ಪ್ರೇರಣೆ ನೀಡುವವರಿಗೆ 1ರಿಂದ 3 ವರ್ಷ ಜೈಲುಶಿಕ್ಷೆ, ಗೋಹತ್ಯೆ ನಿಷೇಧ ಕಾಯ್ದೆಯ ಆರೋಪಿಗಳ ಮನೆ, ಆಸ್ತಿಗೆ ಹಾನಿ ಎಸಗುವವರನ್ನೂ ಶಿಕ್ಷೆಗೆ ಗುರಿಪಡಿಸುವ ಪ್ರಸ್ತಾವನೆಯಿದೆ. ಇದಕ್ಕೂ ಮುನ್ನ ಸರಕಾರ ಗೋವುಗಳ ಸಾಗಣೆಗೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಿ ಕಾನೂನನ್ನು ಸರಳಗೊಳಿಸಿತ್ತು. ಅಲ್ಲದೆ ಹಾಲು ಕರೆಯುವ ಹಸುಗಳನ್ನು ಜಾನುವಾರು ಮಾರುಕಟ್ಟೆಯಲ್ಲಿ ಮಾತ್ರ ಖರೀದಿಸಬೇಕು ಎಂಬ ನಿಯಮವನ್ನು ರದ್ದುಗೊಳಿಸಿ, ರೈತರ ಮಧ್ಯೆ ಹಸು ಕೊಂಡುಕೊಳ್ಳುವಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News