ಅಕ್ರಮ ಗಣಿಗಾರಿಕೆ ತಡೆಯಲು ಉಪಗ್ರಹ ಆಧರಿತ ನಿಗಾ ವ್ಯವಸ್ಥೆ: ಪ್ರಹ್ಲಾದ್ ಜೋಷಿ

Update: 2019-07-17 16:41 GMT

ಹೊಸದಿಲ್ಲಿ, ಜು.17: ದೇಶದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಉಪಗ್ರಹ ಆಧಾರಿತ ನಿಗಾ ವ್ಯವಸ್ಥೆ ಪರಿಣಾಮಕಾರಿಯಾಗಿದೆ ಎಂದು ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ ಬುಧವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ದೇಶದ ಬಹುತೇಕ ಪ್ರಮುಖ ಗಣಿಗಳ ಲೀಸ್ ಪ್ರಕ್ರಿಯೆಯನ್ನು ಗಣಿಗಾರಿಕೆ ಕಣ್ಗಾವಲು ವ್ಯವಸ್ಥೆ(ಎಂಎಸ್‌ಎಸ್)ಯಡಿ ತರಲಾಗಿದೆ . ಎಂಎಸ್‌ಎಸ್ ಮೂಲಕ ದೇಶದ ಅಕ್ರಮ ಗಣಿಗಾರಿಕೆ ಚಟುವಟಿಕೆಯ ಮೇಲೆ ನಿಗಾ ಇರಿಸಲು ಸಾಧ್ಯವಾಗಿದೆ. ಎಂಎಸ್‌ಎಸ್ ಉಪಗ್ರಹ ಆಧಾರಿತ ನಿಗಾ ವ್ಯವಸ್ಥೆಯಾಗಿದ್ದು ಸ್ವಯಂಚಾಲಿತ ದೂರ ಸಂವೇದಿ ಪತ್ತೆ ತಂತ್ರಜ್ಞಾನದ ಮೂಲಕ ಅಕ್ರಮ ಗಣಿಗಾರಿಕೆಯನ್ನು ಪತ್ತೆ ಹಚ್ಚುತ್ತದೆ ಎಂದು ಸಚಿವರು ತಿಳಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

   ಲೀಸ್ ನೀಡಲಾದ ಪ್ರದೇಶದ ಗಡಿಯ ವ್ಯಾಪ್ತಿಯನ್ನು ಮೀರಿ 500 ಮೀಟರ್‌ವರೆಗಿನ ಭೂಮಿಯ ಮೇಲ್ಮೈಯಲ್ಲಿ ನಡೆಸಲಾಗುವ ಚಟುವಟಿಕೆಯನ್ನು ಗುರುತಿಸಿ ಸಂಕೇತ ನೀಡುತ್ತದೆ. ಈ ಬಗ್ಗೆ ಸರಕಾರ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. 2016-17ರಲ್ಲಿ ದೇಶದಾದ್ಯಂತ 296 ಘಟನೆಗಳನ್ನು ದಾಖಲಿಸಲಾಗಿದ್ದು ಇದರ ತನಿಖೆ ನಡೆಸಿದಾಗ 47 ಅಕ್ರಮ ಗಣಿಗಾರಿಕೆ ಪ್ರಕರಣಗಳಾಗಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News