ಭಟ್ಕಳ ತಾಲೂಕು ಮಟ್ಟದ ವಿಜ್ಞಾನ, ಸಂಶೋಧನೆ ಕುರಿತ ಸ್ಪರ್ಧೆ

Update: 2019-07-17 16:53 GMT

ಭಟ್ಕಳ: ಭಟ್ಕಳದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ತರಬಿಯತ್ ಎಜ್ಯುಕೇಶನ್ ಸೂಸೈಟಿ(ಶಮ್ಸ್ ಶಾಲೆ) ಹಾಗೂ ಎ.ಜೆ.ಅಕಾಡೆಮಿ ಸಂಶೋಧನೆ ಮತ್ತು ಅಭಿವೃದ್ದಿಯ ಸಹಯೋಗದೊಂದಿಗೆ ಡಿ.15 ರಂದು ರವಿವಾರ ಭಟ್ಕಳ, ಮುರುಡೇಶ್ವರ, ಮಂಕಿ ಮತ್ತು ಶಿರೂರಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಮತ್ತು ಸಂಶೋಧನೆ ಕುರಿತಂತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಎ.ಜೆ.ಅಕಾಡೆಮಿಯ ನಿರ್ದೇಶಕ ಅಬ್ದುಲ್ಲಾ ಜಾವೀದ್, ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್ ಹಾಗು ಉಪಾಧ್ಯಕ್ಷ ನಝೀರ್ ಆಹ್ಮದ್ ಖಾಝಿ ತಿಳಿಸಿದ್ದಾರೆ.

ಈ ಕುರಿತಂತೆ ನ್ಯೂಶಮ್ಸ್ ಸ್ಕೂಲ್ ನಲ್ಲಿ ವಿಜ್ಞಾನ ಮತ್ತು ಸಂಶೋಧನೆ ಯ ಮಹತ್ವ ಮತ್ತು ಶಿಕ್ಷಕ ಹಾಗೂ ಆಡಳಿತ ಮಂಡಳಿಗಳ ಜವಾಬ್ದಾರಿ ಗಳು ಕುರಿತಂತೆ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸ್ಪರ್ಧೆಗಳಲ್ಲಿ ನಾಲ್ಕನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದ್ದು ವಿಜ್ಞಾನ ವಿಷಯದ ವಿವಿಧ ಭಾಗಗಳಾಗಿರುವ ಜೀವ ವಿಜ್ಞಾನ, ಭೌತವಿಜ್ಞಾನ, ಪರಿಸರ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಬಂಧಿಸಿದಂತೆ ಸಂಶೋಧನೆಗಳನ್ನು ಮಂಡಿಸಲಿದ್ದಾರೆ.

ಪ್ರತಿ ವಿಭಾಗದಲ್ಲಿ ಉತ್ತಮ ಸಂಶೋಧನೆ ಮಂಡಿಸುವವರಿಗೆ ಪುರಸ್ಕರಿಸಲಾಗುವುದು. ಅಲ್ಲದೆ, ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ಸಹಕರಿಸಿದ ಶಿಕ್ಷಕರಿಗೆ ಹಾಗೂ ಭಾಗವಹಿಸಿದ ಶಾಲೆಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ವಿಜ್ಞಾನ ಮೇಳ (ಸೈನ್ಸ್ ಫೇರ್)ದಲ್ಲಿ  ಮಂಡಿಸಿದ ಅತ್ಯುತ್ತಮ ಸಂಶೋಧನಾ ಯೋಜನೆಗೆ  ರಾಷ್ಟ್ರೀಯ ಮಟ್ಟದಲ್ಲಿ ಆಯೋಜನೆಗೊಳ್ಳುವ ನ್ಯಾಶನಲ್ ಸೈನ್ಸ್ ಪೇರ್ ನಲ್ಲಿ ಪ್ರದರ್ಶಿಸುವ ಅವಕಾಶ ನೀಡಲಾಗುವುದು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಸಂಯೋಜಕ ಎಂ.ಆರ್.ಮಾನ್ವಿ (9886455416) ಅವರನ್ನು ಸಂಪರ್ಕಿಸಬಹುದಾಗಿದೆ.

ಈ ಕುರಿತು ವಿವರವಾದ ಮಾಹಿತಿಗಾಗಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ವಿಜ್ಞಾನ ವಿಷಯ ಶಿಕ್ಷಕರ ಓರಿಯಂಟೇಶನ್ ಕ್ಯಾಂಪನ್ನು ಅ.31 ರಂದು ಶನಿವಾರ ಬೆಳಿಗ್ಗೆ 10  ಗಂಟೆಯಿಂದ 1 ಗಂಟೆ ವರೆಗೆ ಜಾಮಿಯಾಬಾದ್ ರಸ್ತೆಯಲ್ಲಿರುವ ‘ನ್ಯೂ ಶಮ್ಸ್ ಸ್ಕೂಲ್’ ಸಭಾಂಗಣದಲ್ಲಿ ಆಯೋಜಿಸಿದ್ದು ಆಡಳಿತ ಮಂಡಳಿಯವರು, ಮುಖ್ಯಾಧ್ಯಾಪಕರು ತಮ್ಮ ತಮ್ಮ ಶಾಲೆಯ ಕನಿಷ್ಠ ಮೂವರು ಶಿಕ್ಷಕರನ್ನು ನಿಯೋಜಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News