ಪಾಣೆಮಂಗಳೂರು ಹಾಸ್ಟೆಲ್ ಕಟ್ಟಡದ ಮೇಲ್ಘಾವಣಿ ಕುಸಿತ

Update: 2019-07-17 16:56 GMT

ಬಂಟ್ವಾಳ, ಜು. 17: ಮಂಗಳವಾರ ರಾತ್ರಿ ಸುರಿದ ಮಳೆಗೆ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ದೇವರಾಜು ಅರಸು ಬಾಲಕರ ಹಾಸ್ಟೆಲ್ ಕಟ್ಟಡದ ಮೇಲ್ಘಾವಣಿ ಕುಸಿದು ಬಿದ್ದಿದೆ.

ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಸತಿ ನಿಲಯ 120 ವರ್ಷಕ್ಕೂ ಹಳೆದಾಗಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿತ್ತು. ಈ ಬಾಲಕರ ಹಾಸ್ಟೆಲ್ ಕಟ್ಟಡ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಭೀತಿ ಎದುರಿಸುತ್ತಿತ್ತು. ಈ ಬಗ್ಗೆ "ವಾರ್ತಾಭಾರತಿ"ಯು ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.

ಸ್ಥಳಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ಹಾಸ್ಟೆಲ್‍ಗೆ ಭೇಟಿ ನೀಡಿ, ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್‍ಗಳಿಂದ ಮಾಹಿತಿ ಪಡೆದುಕೊಂಡಿದ್ದರು. ತೀವ್ರ ನಾದುರಸ್ಥಿಗೆ ತಲುಪಿದ ಕಟ್ಟಡದಲ್ಲಿ ವಿದ್ಯಾರ್ಥಿಗಳ ವಾಸ ಅಪಾಯಕಾರಿ ಎಂದರಿತು ಇಲ್ಲಿನ ವಿದ್ಯಾರ್ಥಿಗಳನ್ನು ಮೊಗರ್ನಾಡುವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಇದೀಗ ಕಟ್ಟಡ ಸಂಪೂರ್ಣ ಕುಸಿದು ನಷ್ಟ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟಡದ ಹಂಚು ಹಾಗೂ ಇತರ ಸಲಕರಣೆಗಳನ್ನು ತೆಗೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News