ಚಂದ್ರಯಾನ-2 ಉಡಾವಣೆಗೆ ಮತ್ತೆ ಮುಹೂರ್ತ ಫಿಕ್ಸ್

Update: 2019-07-18 03:48 GMT

ಬೆಂಗಳೂರು, ಜು.18: ತಾಂತ್ರಿಕ ದೋಷದಿಂದಾಗಿ ಸೋಮವಾರ ಹಠಾತ್ತನೇ ಮುಂದೂಡಲ್ಪಟ್ಟಿದ್ದ ಚಂದ್ರಯಾನ-2 ಉಡಾವಣೆಯನ್ನು ಈ ತಿಂಗಳ 21 ಅಥವಾ 22ರಂದು ನಡೆಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮುಂದಾಗಿದೆ.

ಶ್ರೀಹರಿಕೋಟಾದ ಲಾಂಚ್‌ ಪ್ಯಾಡ್‌ನಲ್ಲಿರುವ ಇಸ್ರೋ ತಾಂತ್ರಿಕ ತಂಡ, ತಾಂತ್ರಿಕ ದೋಷವನ್ನು 48 ಗಂಟೆಗಳಲ್ಲಿ ಬಗೆಹರಿಸುವುದಾಗಿ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಇಸ್ರೋ ಈ ವಿಶ್ವಾಸ ವ್ಯಕ್ತಪಡಿಸಿದೆ. ಈ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸಾಧ್ಯವಾದಷ್ಟು ಬೇಗ ಪಥದರ್ಶನ ಮಾಡಲು ಅನುಕೂಲಕರ ಗವಾಕ್ಷಿ ಇದಾಗಿರುವ ಹಿನ್ನೆಲೆಯಲ್ಲಿ ಇಸ್ರೋ ಈ ಸಿದ್ಧತೆ ನಡೆಸಿದೆ. ಈ ದಿನಾಂಕವನ್ನು ಬಿಟ್ಟರೆ ಮುಂದಿನ ಅನುಕೂಲಕರ ಗವಾಕ್ಷಿಗಾಗಿ ಸೆಪ್ಟೆಂಬರ್‌ವರೆಗೂ ಕಾಯಬೇಕಾಗುತ್ತದೆ.

ತಾಂತ್ರಿಕ ದೋಷವನ್ನು ಸರಿಪಡಿಸುವ ತಂಡದ ಮೂಲಗಳ ಪ್ರಕಾರ, ದೋಷಪೂರಿತ ನಿಪ್ಪಲ್ ಜಾಯಿಂಟ್ ಸರಿಪಡಿಸುವ ಕಾರ್ಯದಲ್ಲಿ ತಂತ್ರಜ್ಞರು ನಿರತರಾಗಿದ್ದಾರೆ. ಜುಲೈ 22ರ ಒಳಗಾಗಿ ಸಂಭಾವ್ಯ ಗವಾಕ್ಷಿಯನ್ನು ಪಡೆಯುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅದು ಹೊಸ ಉಡಾವಣಾ ದಿನಾಂಕವಾಗುವ ಎಲ್ಲಾ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.

ಇಸ್ರೋ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ವಿವೇಕ್ ಸಿಂಗ್ ಅವರು ಈ ಬಗ್ಗೆ, "ನಮ್ಮ ವೆಬ್‌ಸೈಟ್ ನೋಡುತ್ತಿರಿ" ಎಂದಷ್ಟೇ ಹೇಳಿದ್ದಾರೆ. ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ಕೂಡಾ ಸೋಮವಾರ (ಜುಲೈ 22) ಉಡಾವಣೆಯಾಗುವ ಸಾಧ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ. ವೈಫಲ್ಯ ವಿಶ್ಲೇಷಣೆ ತಂಡ ಕೂಡಾ ಇದನ್ನು ನಿರಾಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News