ಮಂಗಳೂರಿನಲ್ಲಿ ಕೃತಕ ನೆರೆ: ಕೇಂದ್ರ ರೈಲು ನಿಲ್ದಾಣಕ್ಕೂ ನುಗ್ಗಿದ ಮಳೆ ನೀರು

Update: 2019-07-18 08:11 GMT

ಮಂಗಳೂರು, ಜು.18: ನಗರ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಮಳೆ ಬಿರುಸುಗೊಂಡಿದೆ. ಈ ನಡುವೆ ಮಂಗಳೂರಿನ ಕೆಲವೆಡೆ ಕೃತಕ ನೆರೆ ಪರಿಸ್ಥಿತಿ ಉದ್ಭವವಾಗಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಸಕ್ರಿಯಗೊಳಿಸಲಾಗಿದೆ.

ಮಂಗಳೂರಿನಲ್ಲಿರುವ ಕೇಂದ್ರ ರೈಲು ನಿಲ್ದಾಣದೊಳಗೆ ಮಳೆ ನೀರು ನುಗ್ಗಿದೆ. ಟಿಕೆಟ್ ಕೌಂಟರ್ ಹೊರಗಡೆ ನೀರು ನಿಂತಿದ್ದು, ಅದನ್ನು ಹೊರಹಾಕಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

 ನಗರದ ಎಂಪೈರ್ ಮಾಲ್ ಸಮೀಪ, ಜೈಲು ರಸ್ತೆ, ಗುಜರಾತಿ ಶಾಲೆ ಬಳಿ, ಜ್ಯೋತಿ ವೃತ್ತದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ರಸ್ತೆಯಲ್ಲೇ ನೀರು ನಿಂತಿದ್ದು, ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ವಾಹನ ಸಂಚಾರಕ್ಕೂ ಕೆಲಕಾಲ ಅಡಚಣೆಯುಂಟಾಗಿತ್ತು. ಮಳೆ ನೀರು ನಿಂತು ಸಂಕಷ್ಟಕ್ಕೀಡಾದವರಿಗೆ ಅಗ್ನಿಶಾಮಕ ದಳ ನೆರವಾಯಿತು.

ಕರಾವಳಿಯಲ್ಲಿ ಇನ್ನೆರಡು ದಿನಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ದ.ಕ. ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ನಿನ್ನೆ ರಾತ್ರಿಯಿಂದಲೂ ಮಳೆ ಸುರಿಯುತ್ತಿದೆ.

ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ನೇತ್ರಾವತಿ, ಕುಮಾರಧಾರ ನದಿ ನೀರಿನ ಮಟ್ಟ ಏರಿಕೆಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News