ಮಳಲಿ: ಹಗಲು ದರೋಡೆ ಪ್ರಕರಣದ ಮೂವರು ಆರೋಪಿಗಳ ಸೆರೆ

Update: 2019-07-18 11:19 GMT

ಮಂಗಳೂರು, ಜು.18: ಮಳಲಿಯಲ್ಲಿ ಮೂರು ದಿನಗಳ ಹಿಂದೆ ನಡೆದ ವ್ಯಕ್ತಿಯೊಬ್ಬರ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿರುವ ಬಜ್ಪೆ ಠಾಣಾ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉಳಾಯಿಬೆಟ್ಟು ಪಟ್ರಕೋಡಿ ನಿವಾಸಿ ಆಶ್ಲೇಷ್ ಎ. ಕೋಟ್ಯಾನ್, ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್ ನಿವಾಸಿ ಅಬ್ದುಲ್ ಅಝೀಝ್ ನೌಶಾದ್ ಮತ್ತು ಕೈಕಂಬ, ಬಡಗುಳಿಪ್ಪಾಡಿ ನಿವಾಸಿ ಮುಹಮ್ಮದ್ ಮುಸ್ತಫ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 21,800 ರೂ. ನಗದು, ಒಂದು ಬೈಕ್, ಮೂರು ಮೊಬೈಲ್ ಫೋನ್, ತಲವಾರು, ಚೂರಿಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಮರೊಳಿಯ ಸೆಂಥಿಲ್ ಕುಮಾರ್ ಎಂಬವರು ಜು.14ರಂದು ಅಪರಾಹ್ನ ತನ್ನ ಬೈಕ್‌ನಲ್ಲಿ ಮೊಗರು ಗ್ರಾಮದ ಮಳಲಿ ಸೈಟ್‌ಗೆ ಹೋಗುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರ ತಂಡ ಅವರನ್ನು ಅಡ್ಡಗಟ್ಟಿ, ಮಾರಕಾಯುಧಗಳಿಂದ ಬೆದರಿಸಿ 2.05 ಲಕ್ಷ ರೂ. ದೋಚಿ ಪರಾರಿಯಾಗಿತ್ತು. ಈ ಬಗ್ಗೆ ಅವರು ನೀಡಿರುವ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಖಚಿತ ಮಾಹಿತಿಯಾಧಾರದಲ್ಲಿ ಮೂವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 60 ಸಾವಿರ ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News