ಮಂಗಳೂರು: ಎರಡನೇ ದಿನ 300 ಹಜ್ ಯಾತ್ರಿಕರು ಮದೀನಾಕ್ಕೆ

Update: 2019-07-18 11:46 GMT
ಪ್ರತಿಯೊಬ್ಬ ಹಜ್ ಯಾತ್ರಿಕರಿಗೆ 2,100 ಸೌದಿ ರಿಯಾಲ್ ವಿತರಿಸುತ್ತಿರುವುದು

ಮಂಗಳೂರು: ಸರಕಾರದ ಹಜ್ ಸಮಿತಿ ವತಿಯಿಂದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎರಡನೇ ದಿನವಾದ ಗುರುವಾರ ಎರಡು ವಿಮಾನಗಳು ಮದೀನಾಕ್ಕೆ ಪ್ರಯಾಣ ಬೆಳೆಸಿದ್ದು, ತಲಾ 150 ರಂತೆ 300 ಪ್ರಯಾಣಿಕರು ತೆರಳಿದ್ದಾರೆ.

ಫೂರ್ವಾಹ್ನ 11:50ಕ್ಕೆ ಹೊರಟ ಏರ್ ಇಂಡಿಯಾ 5199 ನಂಬರಿನ ವಿಮಾನದಲ್ಲಿ 78 ಫುರುಷರು ಮತ್ತು 72 ಮಹಿಳೆಯರಿದ್ದರು. ಹ್ಯಾಂಡ್ ಬ್ಯಾಗ್ ಹೊರತುಪಡಿಸಿ 4266 ಕೆಜಿ ತೂಕದ 251 ಲಗ್ಗೇಜ್ ಬ್ಯಾಗ್ ಗಳಿದ್ದವು. ಅಪರಾಹ್ನ 12:50ಕ್ಕೆ ಹೊರಟ ಏರ್ ಇಂಡಿಯಾ 5201ರಲ್ಲಿ 84 ಪುರುಷರು ಮತ್ತು 66 ಮಹಿಳೆಯರಿದ್ದಾರೆ. ಹ್ಯಾಂಡ್ ಬ್ಯಾಗ್ ಹೊರತುಪಡಿಸಿ 247 ಲಗ್ಗೇಜ್ ಬ್ಯಾಗ್ ಗಳು 4240 ಕೆಜಿ ಇದ್ದವು.

ಬುಧವಾರ ಹೊರಟಿದ್ದ ಪ್ರಥಮ ವಿಮಾನವು ಮಂಗಳೂರಿನಿಂದ ಸಂಜೆ 6:56ಕ್ಕೆ ಹೊರಟಿದ್ದು, ಸೌದಿ ಅರೇಬಿಯಾ ಸಮಯ ರಾತ್ರಿ 09:36ಕ್ಕೆ ತಲುಪಿದೆ. 5 ಗಂಟೆ 40 ನಿಮಿಷದ ಪ್ರಯಾಣ ಸಮಯವಾಗಿದೆ.

ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ಹಜ್ ಕ್ಯಾಂಪಿನಿಂದ ವಿಮಾನ ನಿಲ್ದಾಣಕ್ಕೆ ಬಸ್ ಮೂಲಕ ಪ್ರಯಾಣ ಬೆಳೆಸಿದ ಹಜ್ ಯಾತ್ರಿಕರು ಹೊರಗಿನ ಟರ್ಮಿನಲ್ ನಲ್ಲಿ ಪ್ರತಿಯೊಬ್ಬ ಹಜ್ ಯಾತ್ರಿಕರಿಗೆ 2,100 ಸೌದಿ ರಿಯಾಲ್ ವಿತರಿಸಲಾಯಿತು. ಯಾತ್ರಿಕರು ಈ ಹಿಂದೆ ಕಟ್ಟಿರುವ ಭಾರತೀಯ ಕರೆನ್ಸಿಯನ್ನು ಸೌದಿ ರಿಯಾಲ್ ಗೆ ಬದಲಾಯಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವಿತರಿಸಲಾಯಿತು. ಇನ್ನು ಕೊನೆಯ ಎರಡು ವಿಮಾನವು ಗುರುವಾರ ಮಧ್ಯರಾತ್ರಿ 12:30ಕ್ಕೆ ಹಾಗೂ ಶುಕ್ರವಾರ ಬೆಳಗ್ಗಿನ ಜಾವ 5:50ಕ್ಕೆ ಹೊರಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News