ವಿದ್ಯಾರ್ಥಿಗಳ ಅಭ್ಯುದಯದ ದೃಷ್ಠಿಯಲ್ಲಿ ನಿಯಮ ಜಾರಿ: ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರ ಸ್ಪಷ್ಟನೆ

Update: 2019-07-18 13:06 GMT

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ಕಾಲೇಜ್‍ನಲ್ಲಿಯೂ ಕೆಲವೊಂದು ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಇದರಲ್ಲಿ ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್ ಬಿಟ್ಟು ಹೊರ ಹೋಗಬಾರದು ಎಂಬ ನಿಯಮ ಮಾಡಲಾಗಿದ್ದು, ವಿದ್ಯಾರ್ಥಿಗಳ ಅಭ್ಯುದಯದ ದೃಷ್ಠಿಯಲ್ಲಿ ಈ ನಿಯಮ ಮಾಡಲಾಗಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದು ವಿವೇಕಾನಂದ ಪದವಿ ಕಾಲೇಜ್‍ನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಸ್ಪಷ್ಟಪಡಿಸಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ತನಕ ವಿದ್ಯಾರ್ಥಿಗಳು ಕ್ಯಾಂಪಸ್ ಬಿಟ್ಟು ಹೊರಹೋಗದಂತೆ ನಿಯಮ ಮಾಡಿರುವುದರ ಬಗ್ಗೆ ಬುಧವಾರ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ಪದವಿ ತರಗತಿಯನ್ನು ನಡೆಸದ ಆಡಳಿತ ಮಂಡಳಿಯು ಪದವಿ ತರಗತಿಯ ಎಲ್ಲಾ 2700 ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಆಗಮಿಸಿ ತರಗತಿ ಉಪನ್ಯಾಸಕರನ್ನು ಭೇಟಿ ಮಾಡಿ, ನಿಯಮಾವಳಿಗಳನ್ನು ಅರ್ಥ ಮಾಡಿಕೊಂಡು  ಒಪ್ಪಿಗೆ ನೀಡಿದ ಬಳಿಕವೇ ಅವರಿಗೆ ತರಗತಿ ನಡೆಸಲು ನಿರ್ಧರಿಸಿದೆ.

ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬಳಿಕ ಪದವಿ ತರಗತಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿರುವ ಮಾಹಿತಿಯ ಹಿನ್ನಲೆಯಲ್ಲಿ ಗುರುವಾರ ಕಾಲೇಜ್ ಕ್ಯಾಂಪಸ್‍ಗೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳಿಗೆ ನಿಯಮದ ಅಗತ್ಯತೆಗಳ ಬಗ್ಗೆ ತಿಳಿಸಿದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀನಿವಾಸ ಪೈ ಅವರು ವಿವರಣೆ ನೀಡಿದರು.

ಪದವಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಜಯರಾಂ ಭಟ್, ಉಪಾಧ್ಯಕ್ಷರಾದ ಶಂಕರ ನಾರಾಯಣ ಭಟ್, ಸದಸ್ಯರಾದ ಕೃಷ್ಣ ನಾಯ್ಕ್ ಅಗರ್ತಬೈಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News