‘ಅಲ್ಲಿ ಹೋರಾಡಿ,ಇಲ್ಲಲ್ಲ’: ಜಲವಿವಾದ ಕುರಿತು ಶೋಭಾ ಕರಂದ್ಲಾಜೆಗೆ ಲೋಕಸಭಾ ಸ್ಪೀಕರ್ ಸಲಹೆ

Update: 2019-07-18 14:45 GMT

ಹೊಸದಿಲ್ಲಿ,ಜು.18: ಕಾವೇರಿ ನೀರಿನ ಕುರಿತು ಕರ್ನಾಟಕ-ತಮಿಳುನಾಡು ನಡುವಿನ ವಿವಾದವನ್ನು ಗುರುವಾರ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ‘ಅಲ್ಲಿ ಹೋರಾಡಿ,ಇಲ್ಲಲ್ಲ’ ಎಂದು ಲಘುಧಾಟಿಯಲ್ಲಿ ಸಲಹೆ ನೀಡುವ ಮೂಲಕ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ನಗೆಗಡಲಲ್ಲಿ ತೇಲಾಡಿಸಿದರು. ಪ್ರಶ್ನೆ ವೇಳೆಯಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನು ಪ್ರಸ್ತಾಪಿಸಿದ ಕರಂದ್ಲಾಜೆ ಪ್ರತಿಪಕ್ಷ ಆಸನಗಳಲ್ಲಿ ಕುಳಿತಿದ್ದ ತಮಿಳುನಾಡು ಸಂಸದರತ್ತ ಬೆಟ್ಟು ಮಾಡಿ,ಕಾವೇರಿ ನೀರಿನ ಕುರಿತು ತಮಿಳುನಾಡು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶದೊಂದಿಗಿನ ರಾಜ್ಯದ ವಿವಾದವನ್ನು ಉಲ್ಲೇಖಿಸಿದರು. ಈ ವೇಳೆ ‘ಅಲ್ಲಿ ಹೋರಾಡಿ,ಇಲ್ಲಲ್ಲ’ ಎಂದು ಸ್ಪೀಕರ್ ಹೇಳಿದಾಗ ಸದನದಲ್ಲಿ ನಗುವಿನ ಅಲೆಗಳು ಎದ್ದವು.

ರಾಜ್ಯಗಳ ನಡುವಿನ ಹೆಚ್ಚಿನ ಜಲವಿವಾದಗಳು ನ್ಯಾಯಾಲಯಗಳಲ್ಲಿ ಅಥವಾ ನ್ಯಾಯಾಧಿಕರಣಗಳಲ್ಲಿವೆ ಎಂದು ಹೇಳಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು,ಇಂತಹ ವಿವಾದಗಳನ್ನು ಬಗೆಹರಿಸಲು ರಾಜ್ಯಗಳ ಸಹಕಾರವನ್ನು ಕೋರಿದರು.

 ಅಂತರ್ಜಲ ಕುಸಿತವುಂಟಾಗಿರುವ 256 ಜಿಲ್ಲೆಗಳಲ್ಲಿ ಅಂತಹ ಒಟ್ಟು 1,592 ಬ್ಲಾಕ್‌ಗಳನ್ನು ಗುರುತಿಸಲಾಗಿದೆ ಎಂದ ಅವರು,ದೇಶದಲ್ಲಿಯ ಒಟ್ಟು 17.87 ಗ್ರಾಮೀಣ ಕುಟುಂಬಗಳ ಪೈಕಿ ಸುಮಾರು ಶೇ.18.33ರಷ್ಟು ಅಂದರೆ 3.27 ಕೋ.ಕುಟುಂಬಗಳು ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಪಡೆಯುತ್ತಿವೆ. ಮುಂಗಡಪತ್ರ ಭಾಷಣದಲ್ಲಿ ಪ್ರಕಟಿಸಿರುವಂತೆ ಜಲಜೀವನ ಅಭಿಯಾನದಡಿ 2024ರ ವೇಳೆಗೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News