ವ್ಯಾಸರಾಜರ ಬೃಂದಾವನ ಧ್ವಂಸ: ಪೇಜಾವರಶ್ರೀ, ಪಲಿಮಾರುಶ್ರೀ ಖಂಡನೆ

Update: 2019-07-18 14:52 GMT

ಉಡುಪಿ, ಜು.18: ಕೊಪ್ಪಳ ಜಿಲ್ಲೆಯ ಆನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿರುವ ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಜರ ಬೃಂದಾವನವನ್ನು ಬುಧವಾರ ರಾತ್ರಿ ದುಷ್ಕರ್ಮಿಗಳು ಧ್ವಂಸಗೊಳಿಸಿದ ಘಟನೆಯನ್ನು ಉಡುಪಿ ಪೇಜಾವರ, ಪುತ್ತಿಗೆ ಮತ್ತು ಪರ್ಯಾಯ ಪಲಿಮಾರು ಮಠಾಧೀಶರು ಖಂಡಿಸಿದ್ದಾರೆ.

ನವ ಬೃಂದಾವನದಲ್ಲಿ ವ್ಯಾಸರಾಜರ ಬೃಂದಾವನವನ್ನು ಧ್ವಂಸಗೊಳಿಸಿರುವುದು ಮಾಧ್ವ ಸಮಾಜ ಹಾಗೂ ಹಿಂದು ಸಮಾಜಕ್ಕೆ ಮಾತ್ರವಲ್ಲದೇ ಇಡೀ ಕರ್ನಾಟಕ ರಾಜ್ಯಕ್ಕೆ ದೊಡ್ಡ ಆಘಾತಕರ ಸುದ್ದಿ. ರಾಜ್ಯದ ಹೆಮ್ಮೆಯ ಸಂಕೇತವಾದ ವಿಜಯನಗರ ಸಾಮ್ರಾಜ್ಯದ ಸಂರಕ್ಷಣೆ ಮಾಡಿದ ದೊಡ್ಡ ಯೋಗಿಗಳು ವ್ಯಾಸರಾಯರು. ಅವರು ದಾಸಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಘಟನೆ ಮಾಧ್ವ ಸಮಾಜಕ್ಕೆ ಹಾಗೂ ಕರ್ನಾಟಕಕ್ಕೆ ದೊಡ್ಡ ಅಪಮಾನದ ಸಂಗತಿ. ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ತಾವು ತಮ್ಮೆಲ್ಲಾ ಕಾರ್ಯಕ್ರಮ ಗಳನ್ನು ರದ್ದುಗೊಳಿಸಿ ಆನೆಗೊಂದಿಯ ನವಬೃಂದಾವನಕ್ಕೆ ತೆರಳುವುದಾಗಿ ಅವರು ತಿಳಿಸಿದರು.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಘಟನೆಯನ್ನು ಖಂಡಿಸಿ ವ್ಯಾಸರಾಜರು ವಿಜಯನಗರ ರಾಜಪೀಠಕ್ಕೆ ರಕ್ಷಣೆ ನೀಡಿದವರು. ಈ ಘಟನೆ ಇಡೀ ಆಸ್ತಿಕ ಸಮಾಜಕ್ಕೆ, ದೇಶಕ್ಕೆ ಒಂದು ಸವಾಲಾಗಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದಿದ್ದಾರೆ.

ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ ಇದರ ಕುರಿತು ಸಮಗ್ರ ತನಿಖೆ ನಡೆಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ವ್ಯಾಸರಾಜ ತೀರ್ಥರ ಮೂಲ ಬೃಂದಾವನವನ್ನು ಧ್ವಂಸಗೊಳಿಸಿರುವ ಘಟನೆಯನ್ನು ಬ್ರಾಹ್ಮಣ ಸಮಾಜದ ಸಂಘಟಕ ವಾಸುದೇವ ಭಟ್ ಪೆರಂಪಳ್ಳಿ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News