5 ವರ್ಷಗಳಲ್ಲಿ 10,500ಕ್ಕೂ ಅಧಿಕ ಅತ್ಯಾಚಾರ, ಅತ್ಯಾಚಾರ ಯತ್ನ ದೂರುಗಳನ್ನು ಸ್ವೀಕರಿಸಿದ ಎನ್‌ಸಿಡಬ್ಲು

Update: 2019-07-18 15:03 GMT

ಹೊಸದಿಲ್ಲಿ,ಜು.18: ರಾಷ್ಟ್ರೀಯ ಮಹಿಳಾ ಆಯೋಗವು ಕಳೆದೈದು ವರ್ಷಗಳಲ್ಲಿ ಅತ್ಯಾಚಾರ ಮತ್ತು ಅತ್ಯಾಚಾರ ಯತ್ನಗಳ 10,500ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು. ಈ ಪೈಕಿ ಹೆಚ್ಚಿನ ದೂರುಗಳು ಉತ್ತರ ಭಾರತದ ರಾಜ್ಯಗಳಿಂದ ಬಂದಿವೆ.

ಉತ್ತರ ಪ್ರದೇಶದಿಂದ 6,987,ದಿಲ್ಲಿಯಿಂದ 667,ಹರ್ಯಾಣದಿಂದ 659,ರಾಜಸ್ಥಾನದಿಂದ 573 ಮತ್ತು ಬಿಹಾರದಿಂದ 304 ದೂರುಗಳು ದಾಖಲಾಗಿವೆ ಎಂದು ಇರಾನಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ತಿಳಿಸಿದರು.

2014ರಲ್ಲಿ 2,575ರಷ್ಟು ಅತ್ಯಧಿಕ ಸಂಖ್ಯೆಯ ದೂರುಗಳು ದಾಖಲಾಗಿದ್ದವು ಎಂದರು. ಆಯೋಗದಲ್ಲಿ ಕಳೆದ ವರ್ಷ 2,082 ಅತ್ಯಾಚಾರ ಮತ್ತು ಅತ್ಯಾಚಾರ ಯತ್ನ ದೂರುಗಳು ದಾಖಲಾಗಿದ್ದರೆ,ಈ ವರ್ಷ ಅವುಗಳ ಸಂಖ್ಯೆ 550 ಆಗಿದೆ.

2015 ,2016 ಮತ್ತು 2017ರಲ್ಲಿ ಅನುಕ್ರಮವಾಗಿ 2,328,1,359 ಮತ್ತು 1,637 ದೂರುಗಳು ದಾಖಲಾಗಿದ್ದವು ಎಂದು ಇರಾನಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News