ಸಮಾಜಶಾಸ್ತ್ರಜ್ಞ ಪ್ರೊ.ಶ್ರೀಪತಿ ತಂತ್ರಿಗೆ 80ರ ಅಭಿನಂದನೆ

Update: 2019-07-18 15:05 GMT

ಉಡುಪಿ, ಜು.18: ನಾಡಿನ ಖ್ಯಾತನಾಮ ಸಮಾಜಶಾಸ್ತ್ರಜ್ಞ, ಐದು ದಶಕಗಳಿಗೂ ಅಧಿಕಕಾಲ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಪ್ರೊ.ಪಾದೂರು ಶ್ರೀಪತಿ ತಂತ್ರಿ ಅವರು ಬದುಕಿನ 80 ಸಂವತ್ಸರಗಳನ್ನು ಪೂರ್ಣಗೊಳಿಸುತ್ತಿರುವ ಪ್ರಯುಕ್ತ ಅವರ ಶಿಷ್ಯರು, ಅಭಿಮಾನಿಗಳು ಹಾಗೂ ಆಪ್ತರು ಸೇರಿ ಅಭಿನಂದನಾ ಸಮಾರಂಭ ವನ್ನು ಆಯೋಜಿಸಿದ್ದಾರೆ ಎಂದು ಅಭಿನಂದನ ಸಮಿತಿಯ ಸಂಯೋಜಕರಾಗಿ ರುವ ಮಾಹೆಯ ಪ್ರೊ.ವರದೇಶ ಹಿರೇಗಂಗೆ ತಿಳಿಸಿದ್ದಾರೆ.

ಗುರುವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜು.21ರ ರವಿವಾರ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಒಳಾಂಗಣ ಸಭಾಂಗಣದಲ್ಲಿ ಅವರ ಅಭಿನಂದನಾ ಸಮಾರಂಭ ದಿನವಿಡೀ ನಡೆಯುವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.

ಪ್ರೊ. ತಂತ್ರಿ ಅವರು ಒಬ್ಬ ಸಮಾಜಶಾಸ್ತ್ರಜ್ಞನಾಗಿ ಭಾರತೀಯ ದರ್ಶನಗಳ ನಾನಾ ಆಯಾಮಗಳ ಮೇಲೆ ಬೆಳಕುಚೆಲ್ಲುವ ‘ಸನೂತನ ಧರ್ಮದರ್ಶನ’, ಸೃಷ್ಟಿ ಪ್ರಳಯ-ಮರುಸೃಷ್ಟಿ’, ‘ಸನಾತನಧರ್ಮದ ಮಗ್ಗುಲುಗಳು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಹೊಸ ಕೃತಿ ‘ಆಜೀವಿಕರು ಮತ್ತು ವೇದೋತ್ತರ ದಾರ್ಶನಿಕ ಬೆಳವಣಿಗೆಗಳು’ ಸಮಾರಂಭದಲ್ಲಿ ಲೋಕಾಪಣೆಗೊಳ್ಳಲಿದೆ ಎಂದು ಪ್ರೊ.ಹಿರೇಗಂಗೆ ತಿಳಿಸಿದರು.

 ದೇಶದ ಸುಪ್ರಸಿದ್ಧ ಸಮಾಜಶಾಸ್ತ್ರಜ್ಞೆಯಾಗಿರುವ ಪುಣೆಯ ದಿ.ಡಾ.ಇರಾವತಿ ಕರ್ವೆ ಅವರ ಶಿಷ್ಯರಾದ ಪ್ರೊ.ತಂತ್ರಿ, ತಮ್ಮ ಗುರುಗಳ ಸುಪ್ರಸಿದ್ಧ ಮರಾಠಿ ಕೃತಿ, ಜ್ಞಾನಪೀಠ ಪ್ರಶಸ್ತಿ ಪಡೆದ ‘ಯುಗಾಂತ’ವನ್ನು ಕನ್ನಡಕ್ಕೆ ಅನುವಾದಿಸಿದ್ದು, ಇದು ಕನ್ನಡದಲ್ಲೂ ಅತ್ಯಂತ ಜನಪ್ರಿಯ ಕೃತಿ ಎನಿಸಿಕೊಂಡಿದೆ. ಅಲ್ಲದೇ ಇವರು ಸಮಾಜ ಶಾಸ್ತ್ರ, ಮಾನವ ಶಾಸ್ತ್ರ, ಭಾರದತೀಯ ದರ್ಶನ ಪ್ರಾಕಾರಗಳು, ವಾಸ್ತುಶಿಲ್ಪ, ಆಗಮಗಳು, ವಿಗ್ರಹಶಾಸ್ತ್ರಗಳ ಕುರಿತು ವೌಲ್ಯಯುತ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ ಎಂದರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಕಲಬುರ್ಗಿ ಕೇಂದ್ರೀಯ ವಿವಿಯ ಕುಲಾಧಿಪತಿ ಡಾ.ಎನ್.ಆರ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಡಾ.ಸುಧಾ ರಾವ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯ, ಮಾಜಿ ಕುಲಪತಿ ಪ್ರೊ.ಕೆ.ಬೈರಪ್ಪ, ಬೆಂಗಳೂರಿನ ಪ್ರಸಿದ್ಧ ನ್ಯಾಯವಾದಿ ಬಿ.ವಿ.ಆಚಾರ್ಯ, ಒರಿಸ್ಸಾ ಕೇಂದ್ರೀಯ ವಿವಿ ಕುಲಪತಿ ಪ್ರೊ.ಪಿ.ವಿ.ಕೃಷ್ಣ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಎಸ್.ವಿ.ಭಟ್, ವಾಸುದೇವ ಭಟ್ ಪೆರಂಪಳ್ಳಿ, ಪಿ.ಭಾರ್ಗವ ತಂತ್ರಿ, ವೈಷ್ಣವಿ ತಂತ್ರಿ ಹಾಗೂ ಜೈಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News