ಶಿರೂರುಶ್ರೀ ನಿಧನಕ್ಕೆ ವರ್ಷ: ಉತ್ತರಾಧಿಕಾರಿ ನೇಮಕಕ್ಕೆ ನೂರೆಂಟು ವಿಘ್ನ

Update: 2019-07-18 15:45 GMT

ಉಡುಪಿ, ಜು.18: ಉಡುಪಿಯ ಅಷ್ಟಮಠಗಳಲ್ಲಿ ವರ್ಣರಂಜಿತ ವ್ಯಕ್ತಿತ್ವವನ್ನು ಹೊಂದಿದ್ದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನರಾಗಿ ಶುಕ್ರವಾರ ಒಂದು ವರ್ಷ ಪೂರ್ಣಗೊಳ್ಳುತ್ತದೆ.

2018ರ ಜು.17 ರಾತ್ರಿ ಹಠಾತ್ ಅನಾರೋಗ್ಯ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದ ಶ್ರೀ, ಚಿಕಿತ್ಸೆ ಫಲಿಸದೇ ಜೂ.19ರಂದು ಮುಂಜಾನೆ ಮೃತಪಟ್ಟಿದ್ದರು.

ಶ್ರೀಗಳ ಆಕಾಲಿಕ ಮರಣ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಶ್ರೀಗಳ ಸಾವಿಗೆ ಕಾರಣದ ಕುರಿತಂತೆ ಮಣಿಪಾಲ ಆಸ್ಪತ್ರೆಯ ವೈದ್ಯರು ನೀಡಿದ ಹೇಳಿಕೆ ಬಗೆಬಗೆಯ ವಿವಾದಕ್ಕೆ ಕಾರಣವಾಯಿತಲ್ಲದೇ, ತಿಂಗಳಿಗೂ ಅಧಿಕ ಕಾಲ ಶಿರೂರು ಶ್ರೀಗಳ ಸಾವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸುದ್ದಿಯ ಕೇಂದ್ರ ಬಿಂದುವಾಗಲು ಕಾರಣವಾಯಿತು.

ವೈದ್ಯರ ಹೇಳಿಕೆ ಆಧರಿಸಿ ಅಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೇತೃತ್ವದ ತನಿಖಾ ತಂಡ ಎಲ್ಲಾ ಆಯಾಮಗಳಲ್ಲಿ ವಿಸ್ತೃತ ತನಿಖೆ ನಡೆಸಿತ್ತು. ಈ ನಡುವೆ ಊಹಾಪೋಹಗಳು, ಗಾಳಿಸುದ್ದಿಗಳು ಪುಂಖಾನುಪುಂಖ ವಾಗಿ ಹಬ್ಬಿ, ಇಡೀ ಪ್ರಕರಣ ಪ್ರತೀ ಆಯಾಮ ದಲ್ಲಿಯೂ ಕೌತುಕ ಮೂಡಿಸಿತ್ತು. ಜನಸಾಮಾನ್ಯರು ಈ ಬಗ್ಗೆ ಕುತೂಹಲದಿಂದ ಮಾತನಾಡುವಂತಾಗಿತ್ತು.

ಕೊನೆಗೂ ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆಯ ಅಂತಿಮ ವರದಿಯನ್ನು ಮಣಿಪಾಲ ಕೆಎಂಸಿಯ ವೈದ್ಯರು ಸೆ. 7ರಂದು ಪೊಲೀಸರಿಗೆ ಒಪ್ಪಿಸಿದ್ದು, ಇದರಲ್ಲಿ ಶಿರೂರು ಸ್ವಾಮೀಜಿ ಲೀವರ್ ವೈಫಲ್ಯತೆಯಿಂದ ಸಹಜವಾಗಿ ಸಾವನ್ನಪಿದ್ದಾರೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್)ಯ ಪ್ರಕಾರ ಸ್ವಾಮೀಜಿಯ ದೇಹದಲ್ಲಿ ಯಾವುದೇ ವಿಷದ ಅಂಶ ಪತ್ತೆಯಾಗಿಲ್ಲ. ಅನ್ನನಾಳ ದಲ್ಲಿ ರಕ್ತಸ್ರಾವ ಉಂಟಾಗಿ, ಲೀವರ್ ವೈಫಲ್ಯ(ಕ್ರೋನಿಕ್ ಲೀವರ್ ಸಿರೋ ಸಿಸ್)ದಿಂದ ಸ್ವಾಮೀಜಿ ಮೃತಪಟ್ಟಿರುವುದಾಗಿ ಈ ಅಂತಿಮ ವರದಿಯಲ್ಲಿ ತಿಳಿಸಲಾಗಿತ್ತು. ಶಿರೂರು ಶ್ರೀಗಳ ಹಠಾತ್ ಅಸಹಜ ರೀತಿಯ ಸಾವಿನ ಕುರಿತ ಹಲವು ಊಹಾಪೋಹಗಳಿಗೆ ಈ ಮೂಲಕ ಅಂತಿಮ ತೆರೆ ಎಳೆಯಲಾಗಿತ್ತು. ಈ ವರದಿಯನ್ನು ಉಡುಪಿ ಪೊಲೀಸರು ಕುಂದಾಪುರ ಉಪ ವಿಭಾಗಧಿಕಾರಿಗೆ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಅಂತಿಮ ತೆರೆ ಎಳೆಯಲಾಗಿತ್ತು.

ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ವಾಮೀಜಿ, ವೈದ್ಯರ ಎಚ್ಚರಿಕೆ ನಿರ್ಲಕ್ಷಿಸಿದ್ದರಿಂದ ಕಾಯಿಲೆ ಉಲ್ಬಣಿಸಿತ್ತು. ಅನ್ನನಾಳದಲ್ಲಿ ಆದ ರಕ್ತಸ್ರಾವ ಹಾಗೂ ಕ್ರೋನಿಕ್ ಲೀವರ್ ಸಿರಾಸಿಸ್ (ಲೀವರ್ ವೈಫಲ್ಯ) ಅವರ ಹಠಾತ್ ಸಾವಿಗೆ ಕಾಣ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಶಿರೂರು ಮಠ ಪರಂಪರೆಯ 30ನೇ ಯತಿಯಾಗಿ ಸನ್ಯಾಸ ಸ್ವೀಕರಿಸಿದ್ದ ಶ್ರೀಗಳು ವರ್ಣಮಯ ಮತ್ತು ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿ ದ್ದರು. ಹಿರಿಯಡ್ಕ ಬಳಿಯ ಶಿರೂರು ಮೂಲ ಮಠದಲ್ಲಿ ಶಿರೂರುಶ್ರೀಗಳು ಜು.16 ರಂದು ಮಠಕ್ಕೆ ಭೇಟಿ ನೀಡಿದ್ದ ಉಡುಪಿಯ ಪತ್ರಕರ್ತರೊಂದಿಗೆ ‘ಮನಬಿಚ್ಚಿ’ ಮಾತನಾಡಿದ್ದರು. ತನ್ನ ವಾಹನವನ್ನು ಶರವೇಗದಲ್ಲಿ ಚಲಾಯಿಸಿ ಪತ್ರಕರ್ತರ ಎದೆಗುಂಡಿಗೆ ಕ್ಷಣಕಾಲ ನಿಲ್ಲುವಂತೆ ಮಾಡಿದ್ದರು. ಅಲ್ಲದೇ ಮೂರ್ನಾಲ್ಕು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸೇರಿ ಮಠದ ಜಾಗದಲ್ಲಿ ಅರಣ್ಯ ಬೆಳೆಸಲು ಗಿಡ ನೆಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದರು. ಆದರೆ ಅದೇ ದಿನ ರಾತ್ರಿ ಹಠಾತ್ ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಅನಾಥವಾಗಿರುವ ಶಿರೂರು ಮಠ

ಶಿರೂರು ಸ್ವಾಮೀಜಿಯವರ ಹಠಾತ್ ನಿಧನದಿಂದ ಆ ಮಠದ ನಿರ್ವಹಣೆ ಹಾಗೂ ಉತ್ತರಾಧಿಕಾರಿ ನೇಮಕದ ಸಂಪೂರ್ಣ ಜವಾಬ್ದಾರಿ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಹೆಗಲೇರಿತು. ಆದರೆ ಶಿರೂರು ಮಠದ ಮೇಲಿದ್ದ ಅಗಾಧ ಪ್ರಮಾಣದ ಸಾಲದ ಹೊರೆ, ನ್ಯಾಯಾಲಯ ದಲ್ಲಿದ್ದ ಕೇಸುಗಳ ಹಾಗೂ ಇತರ ಅವ್ಯವಹಾರಗಳ ಗೋಜಲಿನಿಂದಾಗಿ ಸೋದೆ ಶ್ರೀಗಳಿಗೆ ಈವರೆಗೆ ಶಿರೂರು ಮಠಕ್ಕೆ ಸೂಕ್ತ ಉತ್ತರಾಧಿಕಾರಿ ಯನ್ನು ನೇಮಿಸಲು ಸಾಧ್ಯವಾಗಿಲ್ಲ. ಹೀಗಾಗಿ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಧನದ ಬಳಿಕ ಶಿರೂರು ಮಠ ಯತಿಗಳಿಲ್ಲದೇ ಅನಾಥವಾಗಿದೆ.

ವಿವಾದ ಇತ್ಯರ್ಥ ಬಳಿಕ ಶಿಷ್ಯ ಸ್ವೀಕಾರ

ಮಠಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿರುವ ಮೊಕದ್ದಮೆಗಳೆಲ್ಲವೂ ಇತ್ಯರ್ಥಗೊಂಡ ಬಳಿಕ ಶಿಷ್ಯ ಸ್ವೀಕಾರ ನಡೆಯಲಿದೆ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಈಗಾಗಲೇ ತಿಳಿಸಿದ್ದಾರೆ. ಮಠದ ಯತಿ ಎನಿಸಿಕೊಳ್ಳಲು ಎಲ್ಲಾ ರೀತಿಯಲ್ಲೂ ಅರ್ಹವೆನಿಸಿದ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಬೇಕೆಂಬುದು ಭಕ್ತರ ಆಗ್ರಹ.

ಈ ನಡುವೆ ಅರ್ಹ ವಟುವೊಬ್ಬರನ್ನು ಗುರುತಿಸಿ ಸೋಂದಾ ಕ್ಷೇತ್ರದ ಗುರುಕುಲದಲ್ಲಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಮುಗಿದ ಬಳಿಕ ಅವರಿಗೆ ಸನ್ಯಾಸ ದೀಕ್ಷೆ ನೀಡಿ ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಲಾಗುವುದು ಎಂದು ಸೋದೆ ಶ್ರೀಗಳು ತಿಳಿಸಿದ್ದಾರೆ.

ಶಿರೂರು ಶ್ರೀ ಬೃಂದಾವನ ನಿರ್ಮಾಣಕ್ಕೆ ಸಿದ್ಧತೆ

ಈ ನಡುವೆ ಆ.7ರಂದು ನಡೆಯುವ ಪ್ರಥಮ ಆರಾಧನೆ ದಿನದಂದು ಶಿರೂರು ಮೂಲ ಮಠದಲ್ಲಿರುವ ಸಮಾಧಿ ಸ್ಥಳದಲ್ಲಿ ಸಂಪ್ರದಾಯಬದ್ಧವಾಗಿ ವೃಂದಾವನ ಪ್ರತಿಷ್ಠಾಪಿಸಲು ಸೋದೆಶ್ರೀಗಳು ನಿರ್ಧರಿಸಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ. ಈಗಾಗಲೇ 25 ಲಕ್ಷ ರೂ. ವೆಚ್ಚದಲ್ಲಿ ಶಿರೂರು ಮೂಲಮಠವನ್ನು ನವೀಕರಿಸಲಾಗಿದೆ. ಪಾಪುಜೆ ಮಠವನ್ನು ಶಿರೂರು ಮಠದಿಂದಲೇ ಜೀರ್ಣೋದ್ಧಾರ ಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದೂ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News