ತೀವ್ರವಾದಿ ಎಡಪಂಥಕ್ಕೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಸದಸ್ಯೆಯರು: ಮುಂದುವರಿದ ಟ್ರಂಪ್ ವಾಗ್ದಾಳಿ

Update: 2019-07-18 15:49 GMT

ವಾಶಿಂಗ್ಟನ್, ಜು. 18: ಡೆಮಾಕ್ರಟಿಕ್ ಪಕ್ಷದ ನಾಲ್ವರು ಪ್ರಗತಿಪರ ಸಂಸದೆಯರ ವಿರುದ್ಧದ ದಾಳಿಯನ್ನು ಮುಂದುವರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರದ್ದು ಅಮೆರಿಕಕ್ಕೆ ವಿರುದ್ಧವಾದ ಸಂಸ್ಕೃತಿ ಎಂಬುದಾಗಿ ಹೇಳಿದ್ದಾರೆ.

ಹಾಗಾಗಿ, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಈ ವಿಷಯವನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಲಿರುವುದು ಈಗ ನಿಶ್ಚಿತವಾಗಿದೆ ಎಂಬುದಾಗಿ ವಿಶ್ಲೇಷಕರು ಭಾವಿಸಿದ್ದಾರೆ.

ಅಲ್ಪಸಂಖ್ಯಾತ ಕಾಂಗ್ರೆಸ್ ಸದಸ್ಯೆಯರ ವಿರುದ್ಧ ಟ್ರಂಪ್ ಮಾಡಿರುವ ವಾಗ್ದಾಳಿಗಳು ಜನಾಂಗೀಯವಾದಿ ಎಂಬುದಾಗಿ ಡೆಮಾಕ್ರಟಿಕ್ ಪಕ್ಷದ ನಾಯಕರು ಟೀಕಿಸಿರುವ ಹೊರತಾಗಿಯೂ, ಟ್ರಂಪ್ ಅವರ ವಿರುದ್ಧದ ವಾಗ್ದಾಳಿಯನ್ನು ಹೆಚ್ಚಿಸಿದ್ದಾರೆ. ವಲಸೆ ಮತ್ತು ಇಸ್ರೇಲ್ ಸಮರ್ಥನೆ ಮುಂತಾದ ವಿಷಯಗಳಲ್ಲಿ ತನ್ನ ನೀತಿಗಳು ಅವರಿಗೆ ಹಿಡಿಸದಿದ್ದರೆ, ಅವರು ದೇಶ ತೊರೆಯಲು ಸ್ವತಂತ್ರರು ಎಂಬುದಾಗಿ ಅವರು ಹೇಳಿದ್ದಾರೆ.

 ‘‘ಈ ಕಾಂಗ್ರೆಸ್ ಸದಸ್ಯೆಯರು ಮತ್ತು ಅವರ ಹೇಳಿಕೆಗಳು ಅಪಾಯಕಾರಿ ಹಾಗೂ ತೀವ್ರವಾದಿ ಎಡಪಂಥೀಯ ಸಿದ್ಧಾಂತದ ಬೆಳವಣಿಗೆಗೆ ದೇಣಿಗೆ ನೀಡುತ್ತವೆ’’ ಎಂದು ನಾರ್ತ್ ಕರೋಲಿನದ ಗ್ರೀನ್‌ವಿಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

ಸಂಸತ್ತು ಕಾಂಗ್ರೆಸ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯೆಯರಾದ ಮಿನಸೋಟದ ಇಲ್ಹಾನ್ ಉಮರ್, ನ್ಯೂಯಾರ್ಕ್‌ನ ಅಲೆಕ್ಸಾಂಡ್ರಿಯಾ ಒಕಾಸಿಯೊ, ಮಿಶಿಗನ್‌ನ ರಶೀದಾ ತ್ಲೈಬ್ ಮತ್ತು ಮ್ಯಾಸಚೂಸಿಟ್ಸ್‌ನ ಅಯನಾ ಪ್ರೆಸ್ಲಿ ಅವರ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News