ಸ್ವಾತಂತ್ರೋತ್ಸವ ಆಚರಣೆ ಪೂರ್ವಭಾವಿ ಸಭೆ: ಅದ್ಧೂರಿ ಆಚರಣೆಗೆ ಎಡಿಸಿ ಕರೆ

Update: 2019-07-18 16:36 GMT

ಮಂಗಳೂರು, ಜು.18: ಭಾರತದ ಸ್ವಾತಂತ್ರೋತ್ಸವ ದಿನಾಚರಣೆಯು ಇದೇ ಆಗಸ್ಟ್ 15 ರಂದು ನಡೆಯಲಿದ್ದು, ಈ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಯಿತು. ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಕರೆ ನೀಡಿದರು.

ಪೂರ್ವಭಾವಿ ಕವಾಯತು ಅಭ್ಯಾಸ ಮಾಡಲು ಆ. 11, 12, 13ನೇ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ಈ ಕವಾಯತು ಪೋಲಿಸ್ ಇಲಾಖೆಯ ಮುಂದಾಳತ್ವದಲ್ಲಿ ಸೇವಾದಳ, ಸ್ಕೌಟ್ಸ್, ಗೈಡ್ಸ್, ಅರಣ್ಯ, ಅಗ್ನಿ ಶಾಮಕ ದಳ ಹಾಗೂ ಶಾಲಾ ಕಾಲೇಜುಗಳ ಉಪಸ್ಥಿತಿಯೊಂದಿಗೆ ನಡೆಸಲು ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಸ್ವಾತಂತ್ರೋತ್ಸವ ದಿನದಂದು ಕಾರ್ಯಕ್ರಮ ಆರಂಭವಾಗುವ ಮೊದಲು ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಗಾಯನ ಏರ್ಪಡಿಸುವಂತೆ ಸೂಚನೆ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಒಆರ್‌ಎಸ್ ಹಾಗೂ ಮಕ್ಕಳಿಗೆ ಹಣ್ಣಿನ ಪಾನೀಯ ಒದಗಿಸುವಂತೆ ಎಡಿಸಿ ಕೋರಿದರು.

ಧಾರ್ಮಿಕ ದತ್ತಿ ಇಲಾಖೆಯಿಂದ ಸ್ವಾತಂತ್ರೋತ್ಸವ ದಿನದಂದು ಸಿಹಿ ತಿಂಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ವೇದಿಕೆ ಹಾಗೂ ತುರ್ತು ಚಿಕಿತ್ಸಾ ಸಮಿತಿಗಳನ್ನು ರಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರಸನ್ನ, ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತೆ ಗಾಯತ್ರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News