ಮಣಿಪಾಲ: ಮಾಹೆಯಿಂದ 2 ಎಕರೆಯಲ್ಲಿ ಮಳೆ ನೀರಿನ ಕೊಯ್ಲು

Update: 2019-07-18 16:49 GMT

ಮಣಿಪಾಲ, ಜು.18: ಈ ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ಕುಡಿಯುವ ನೀರಿಗಾಗಿ ಕಾಣಿಸಿಕೊಂಡ ಹಾಹಾಕಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಗೆ ನೀರಿನ ಮಹತ್ವದ ಅರಿವು ಆಗುತಿದ್ದು, ಈಗ ಕೆಲವರಾದರೂ ನೀರಿನ ಮಿತವ್ಯಯ, ನೀರಿನ ಸಂಗ್ರಹದ ಕುರಿತು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿ ರುವ ಕುರಿತು ವರದಿಗಳು ಬರುತ್ತಿವೆ.

ಇದೀಗ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಇಂಥ ಒಂದು ಪ್ರಯತ್ನಕ್ಕೆ ತೊಡಗಿಸಿಕೊಂಡಿದ್ದು, ಮಣಿಪಾಲದ ತನ್ನ ಎರಡು ಎಕರೆ ಪ್ರದೇಶದಲ್ಲಿ ಮಳೆ ನೀರಿನ ಕೊಯ್ಲು ಮೂಲಕ ನೀರಿನ ಸಂಗ್ರಹಕ್ಕೆ ಮುಂದಾಗಿದೆ.

ಮಾಹೆಯ ಯೋಜನಾ ತಂಡ ಮಣಿಪಾಲದ ಎಂಡ್‌ಪಾಯಿಂಟ್‌ನಲ್ಲಿರುವ ಎರಡು ಎಕರೆ ಜಾಗದಲ್ಲಿ ಮಳೆ ನೀರಿನ ಸಂಗ್ರಹಕ್ಕೆ ಸಜ್ಜಾಗಿದ್ದು, ಇದೀಗ ಇಲ್ಲಿ ನೀರು ದೊ್ಡ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ.

ಮಾಹೆಯ ಯೋಜನೆಯ ಉಪನಿರ್ದೇಶಕ ಐವನ್ ಡಿಸೋಜ ಅವರು ಈ ಕುರಿತು ವಿವರಗಳನ್ನು ನೀಡಿ, ಮಾಹೆಗೆ ಸೇರಿದ ಎರಡು ಎಕರೆ ಜಾಗದಲ್ಲಿ ಗುಂಡಿ ತೋಡಿ ಸುಮಾರು ಎಂಟು ಮಿಲಿಯನ್ ಲೀಟರ್ ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದ ಮಣಿಪಾಲ ಕ್ಯಾಂಪಸ್ ಒಳಗಿರುವ ಎಲ್ಲಾ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಏರುವ ನಿರೀಕ್ಷೆ ಇದೆ ಎಂದರು.

ಎರಡು ಎಕರೆ ಜಾಗದಲ್ಲಿ ಒಂಟು ಅಡಿ ಹಾಗೂ ಹತ್ತು ಅಡಿ ಗುಂಡಿಗಳನ್ನು ತೊಡಲಾಗಿದೆ. ಇಲ್ಲೀಗ ಕಳೆದೊಂದು ವಾರದಿಂದ ಸುರಿದ ಮಳೆಯಿಂದ ಭಾರೀ ನೀರು ಸಂಗ್ರಹವಾಗಿದೆ. ಈ ನೀರಿನ ಇಂಗು ಗುಂಡಿಗೆ ನಾವು ‘ಮಿನಿ ಪಳ್ಳ’ (ಮಣಿಪಾಲದಲ್ಲಿ ಮಣ್ಣಪಳ್ಳ ಕೆರೆಯಂತೆ) ಎಂದು ಹೆಸರಿಟ್ಟಿದ್ದೇವೆ ಎಂದರು.

ಈ ನೀರಿನ ಹೊಂಡದ ಸುತ್ತ ಯಾರೂ ಬಾರದಂತೆ ಸುರಕ್ಷತಾ ಕ್ರಮವಾಗಿ ಮುಂಜಾಗ್ರತೆಗೆ ಕೆರೆಯ ಸುತ್ತಲೂ ಬೇಲಿಯನ್ನು ನಿರ್ಮಿಸಿದ್ದೇವೆ. ಮಾಹೆ ಕ್ಯಾಂಪಸ್ ಒಳಗೆ ಇದೇ ರೀತಿಯ ಇನ್ನೂ ಎರಡು ಇಂಗು ಗುಂಡಿಗಳನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಡಿಸೋಜ ತಿಳಿಸಿದರು.

ಇಲ್ಲಿ ಮಳೆ ನೀರಿನ ಕೊಯ್ಲು, ಸಂಗ್ರಹ ಹಾಗೂ ಪುನರ್‌ಬಳಕೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗುತ್ತದೆ. ವಿವಿಯು ಮಳೆ ನೀರಿನ ಕೊಯ್ಲು ಹಾಗೂ ಭೂಮಿಯ ಜಲಮೂಲವನ್ನು ವೃದ್ಧಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದೂ ಐವನ್ ಡಿಸೋಜ ನುಡಿದರು.

ಎಲ್ಲಾ ಕಟ್ಟಡಗಳ ಮಾಡುಗಳಿಂದ ನೀರನ್ನು ಸಂಗ್ರಹಿಸಲು ಈಗಾಗಲೇ ಸ್ಟೇಶನ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ನೀರನ್ನು ಮರಳಿನ ಮೂಲಕ ಹಾಯಿಸಿ ಸೋಸಿ ಶುದ್ಧಗೊಳಿಸಲಾಗುತ್ತದೆ. ಈ ನೀರನ್ನು ನೆಲದೊಳಗಿನ ಸಂಪ್ಸ್‌ಗಳಲ್ಲಿ ಸಂಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಮಾಹೆ ಸಿಬ್ಬಂದಿಗಳ ಅಗತ್ಯದ ಉಪಯೋಗಕ್ಕೆ ಬಳಸಲಾಗುತ್ತಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News