ಅವಧಿಪೂರ್ವ ಬಿಡುಗಡೆ ಕೋರಿ ನಳಿನಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತ

Update: 2019-07-18 17:40 GMT

ಚೆನ್ನೈ, ಜು.18: ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರಿಹರನ್ ಅವಧಿಪೂರ್ವ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗುರುವಾರ ತಳ್ಳಿಹಾಕಿದೆ.

ತನ್ನನ್ನು ಅವಧಿಪೂರ್ವ ಬಿಡುಗಡೆಗೊಳಿಸಲು ರಾಜ್ಯಪಾಲರಿಗೆ ಸೂಚಿಸಬೇಕೆಂದು ನಳಿನಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿದ್ದರು. ಆದರೆ ರಾಜ್ಯಪಾಲರು ತನ್ನ ಸಾಂವಿಧಾನಿಕ ಬಾಧ್ಯತೆಗಳನ್ನು ನಿರ್ವಹಿಸಿದ್ದು, ಇದನ್ನು ನ್ಯಾಯಾಂಗ ಪ್ರಶ್ನಿಸುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿ ಅರ್ಜಿಯನ್ನು ತಳ್ಳಿಹಾಕಿದೆ. ರಾಜ್ಯದ ರಾಜ್ಯಪಾಲರು ತನ್ನ ಅಧಿಕೃತ ಕರ್ತವ್ಯ ನಿರ್ವಹಿಸಿರುವುದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ ಅಥವಾ ಅವರು ಉತ್ತರದಾಯಿಗಳಾಗಿಲ್ಲ ಎಂದು ಸಂವಿಧಾನದ 361ನೇ ವಿಧಿಯಲ್ಲಿ ತಿಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್ ಸುಬ್ಬಯ್ಯ ಮತ್ತು ಸಿ ಸರವಣನ್ ಅವರಿದ್ದ ನ್ಯಾಯಪೀಠವು ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಸಚಿವ ಸಂಪುಟ ನೀಡಿದ ಸಲಹೆಯನ್ನೂ ರಾಜ್ಯಪಾಲರು ಪರಿಗಣಿಸಿಲ್ಲ ಎಂಬ ವಾದದ ಆಧಾರದಲ್ಲಿ, ಸಂವಿಧಾನದಲ್ಲಿ ಖಾತರಿಗೊಳಿಸಿದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸುವುದು ಸರಿಯಲ್ಲ . ಸಂವಿಧಾನದ 361ನೇ ವಿಧಿಯ ಪ್ರಕಾರ ರಾಜ್ಯಪಾಲರಿಗೆ ಇರುವ ಅಧಿಕಾರ ಮತ್ತು ವಿನಾಯಿತಿಯನ್ನು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

 ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳಿನಿ ಹಾಗೂ ಇತರ ಆರು ದೋಷಿಗಳನ್ನು ಬಿಡುಗಡೆ ಮಾಡಬೇಕೆಂಬ ನಿರ್ಣಯವನ್ನು 2018ರ ಸೆ.9ರಂದು ಸಚಿವ ಸಂಪುಟ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿತ್ತು. ಸಚಿವ ಸಂಪುಟದ ನಿರ್ಣಯಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯಪಾಲರಿಗೆ ಸೂಚಿಸಬೇಕೆಂದು ಕೋರಿ ನಳಿನಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News