ನೇರಳಕಟ್ಟೆ: 'ಜನಪ್ರಿಯ ಗಾರ್ಡನ್'ನಲ್ಲಿ ಉಚಿತ ಸಾಮೂಹಿಕ ವಿವಾಹ

Update: 2019-07-19 10:45 GMT

ವಿಟ್ಲ : ಕಂಬಳಬೆಟ್ಟು ಅಂದುಂಞಿ ಹಾಜಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬಡ ಕುಟುಂಬದ ಎರಡು ಜೋಡಿಯ ಉಚಿತ ಸಾಮೂಹಿಕ ವಿವಾಹವು ನೇರಳಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡ 'ಜನಪ್ರಿಯ ಗಾರ್ಡನ್' ನಲ್ಲಿ ಗಾರ್ಡನ್ ಮಾಲಕ ಡಾ. ಅಬ್ದುಲ್ ಬಶೀರ್ ಅವರ ನೇತ್ರತ್ವದಲ್ಲಿ ಗುರುವಾರ ನಡೆಯಿತು.

ನಿಖಾಹ್ ನೆರವೇರಿಸಿದ ಕಲ್ಲೇಗ ಜುಮಾ ಮಸೀದಿ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಮಾತನಾಡಿ ಬಡವರು, ಅನಾಥರು ಹಾಗೂ ಅಸಹಾಯಕರಿಗೆ ಸಹಾಯ ಮಾಡುವ ಕೈಗಳು ಭಗವಂತನ ಸಂಪ್ರೀತಿಗೆ ಪಾತ್ರವಾದ ಶ್ರೇಷ್ಠ ಕೈಗಳಾಗಿವೆ ಎಂದ ಅವರು ಕೋಟಿಗಟ್ಟಲೆ ವೆಚ್ಚದ ಅದ್ದೂರಿಯ ಮದುವೆ ಮಾಡಿ ಪ್ರತಿಷ್ಟೆ ಮೆರೆಯುವುದಕ್ಕಿಂತ ಬಡಬಗ್ಗರ ಮದುವೆಗೆ ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಲು ಹಾಗೂ ಆಡಂಬರದ ವಿವಾಹಗಳಿಗೆ ಕಡಿವಾಣ ಹಾಕಲು ಸಿರಿವಂತರು ಮುಂದಾಗಬೇಕು. ಮದುವೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಚಾರಗಳು ನಡೆಯ ದಂತೆ ಎಲ್ಲರೂ ಗಮನಹರಿಸಬೇಕಾಗಿದೆ ಎಂದರು.

ಮುಕ್ವೆ ಜುಮಾ ಮಸೀದಿ ಖತೀಬ್ ಹಬೀಬುರ್ರಹ್ಮಾನ್ ತಂಙಳ್ ಮಾತನಾಡಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಂಬಳಬೆಟ್ಟು ಅಂದುಂಞಿ ಹಾಜಿ  ಮೆಮೋರಿಯಲ್ ಟ್ರಸ್ಟ್ ನ ಉಚಿತ ಸಾಮೂಹಿಕ ವಿವಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಜಿ ಅಬ್ದುರ್ರಹ್ಮಾನ್ ಪಾದೂರ್, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಬಿ.ಮುಹಮ್ಮದ್ ಕುಂಞಿ, ಡಾ. ಆಲಂ ನವಾಝ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವಿ.ಕೆ.ಅಬ್ದುಲ್ ಖಾದರ್ ಹಾಜಿ ಬದ್ರಿಯ, ವಿ.ಕೆ.ಅಬ್ದುಲ್ ಅಝೀಝ್, ವಿ.ಕೆ.ಗಫೂರ್ ಹಾಜಿ, ವಿ.ಕೆ.ಇಸ್ಮಾಯಿಲ್ ಹಾಜಿ, ಶುಕೂರ್ ಹಾಜಿ ಕಲ್ಲೇಗ, ಮಾಸ್ಟರ್ ಶಾರೂಕ್ ಮೊದಲಾದವರು ಉಪಸ್ಥಿತರಿದ್ದರು.

ಕಬಕ - ಪೋಳ್ಯ ನಿವಾಸಿ ಫಾತಿಮತ್ ತನ್ಸೀರಾ, ಪಾವೂರು ನಿವಾಸಿ ಅಬ್ದುಲ್ ರಫೀಕ್ ಹಾಗೂ ಬೆದ್ರಾಲ ನಿವಾಸಿ ಆಯಿಷಾ, ಈಶ್ವರಮಂಗಿಲ - ಕಾರ್ನೂರು ನಿವಾಸಿ ಹೈದರ್ ಅಲಿ ಅವರ ವಿವಾಹ ಕಾರ್ಯಕ್ರಮ ನಡೆಯಿತು.

ಇದಕ್ಕೂ ಮುನ್ನ ಜನಪ್ರಿಯ ಗಾರ್ಡನ್ ಗೆ ಆಗಮಿಸಿದ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರ, ಸಯ್ಯದ್ ಆಟಕೋಯ ತಂಙಳ್ ಕುಂಬೋಳ್, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ವಿವಾಹ ಸಮಾರಂಭ ಹಾಗೂ ಸಂಸ್ಥೆಗೆ ಶುಭ ಹಾರೈಸಿ ಪ್ರಾರ್ಥನೆ ನೆರವೇರಿಸಿದರು.

ಸಂಸ್ಥೆಯ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ಸ್ವಾಗತಿಸಿ, ಡಾ. ಕಿರಾಸ್ ಅಬ್ದುಲ್ಲಾ ವಂದಿಸಿದರು. ಉಮ್ಮರ್ ಸಖಾಫಿ ಕಂಬಳಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News