ಮಾದಕ ವ್ಯಸನದಂತಹ ದುಶ್ಚಟಗಳು ಮೌಲ್ಯಗಳ ಅಧಃಪತನಕ್ಕೆ ಕಾರಣ: ಪ್ರೊ.ಶರ್ಲಿ ರಾಣಿ

Update: 2019-07-19 11:04 GMT

ಮಂಗಳೂರು, ಜು.19: ಇಂದಿನ ಕಾಲದಲ್ಲಿ ಹೆತ್ತವರು ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಹೇರಿ ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಅತಿಯಾದ ಒತ್ತಡವನ್ನು ತಾಳಿಕೊಳ್ಳಲಾಗದ ಯುವಜನತೆ ಪ್ರತ್ಯೇಕತೆಯನ್ನು ಬಯಸಿ ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಸಲುವಾಗಿ ಋಣಾತ್ಮಕವಾದ ಹಾದಿಯನ್ನು ತುಳಿಯುತ್ತಿದ್ದಾರೆ. ಇನ್ನೋರ್ವರ ಮೇಲೆ ಪ್ರಭುತ್ವ ಸಾಧಿಸುವ ಸಲುವಾಗಿ ರ್ಯಾಗಿಂಗ್, ಮಾದಕ ವ್ಯಸನಗಳಂತಹ ದುಶ್ಚಟಗಳ, ಕಾನೂನು ಬಾಹಿರ ಚಟುವಟಿಕೆಗಳ ದಾಸರಾಗುತ್ತಿದ್ದಾರೆ ಎಂದು ಪ್ರಾಧ್ಯಾಪಕಿ ಪ್ರೊ.ಶರ್ಲಿ ರಾಣಿ ತಿಳಿಸಿದರು.

ನಗರದ ವಿವಿ ಸಂಧ್ಯಾ ಕಾಲೇಜಿನ ಸಾಹಿತ್ಯ ಸಂಘವು ಆಯೋಜಿಸಿದ್ದ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನ, ರ್ಯಾಗಿಂಗ್ ಹಾಗೂ ಲೈಂಗಿಕ ಕಿರುಕುಳ ವಿರೋಧಿ ಜಾಗೃತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಾದಕ ವ್ಯಸನಗಳ ದಾಸರಾದವರು ಜೀವನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೆ, ಸ್ತ್ರೀ ಪುರುಷರನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಲೈಂಗಿಕ ಕಿರುಕುಳಗಳಂತಹ ಸಾಮಾಜಿಕ, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಾರಣರಾಗಿ ಸ್ವಸ್ಥ ಸಮಾಜದ ಮೂಲ ಆಶಯಗಳಾದ ಸಾಮಾಜಿಕ, ಕೌಟುಂಬಿಕ ಮೌಲ್ಯಗಳ ಅಧಃಪತನಕ್ಕೆ ಕಾರಣರಾಗುತ್ತಾರೆ ಎಂದು ಪ್ರೊ. ಶರ್ಲಿ ರಾಣಿ ನುಡಿದರು

ಇವೆಲ್ಲ ಸಮಸ್ಯೆಗಳಿಂದ ಮುಕ್ತರಾಗಬೇಕಾದರೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಏಕಾಗ್ರತೆ ಹೊಂದಿ ಕೀಳರಿಮೆಯಿಂದ ಹೊರಬಂದು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ಹೆತ್ತವರು ಮಕ್ಕಳ ಮೇಲೆ ಯಾವುದೇ ಒತ್ತಡ ಹೇರದೆ ಕನಸುಗಳನ್ನು ಬೆಂಬಲಿಸಬೇಕು. ಆಗ ವಿದ್ಯಾರ್ಥಿಗಳು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗುವುದನ್ನು ತಡೆಯಬಹುದು ಎಂದು ಪ್ರೊ. ಶರ್ಲಿ ರಾಣಿ ನುಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ರಾಮಕೃಷ್ಣ ಬಿ.ಎಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಹಾಗೂ ಸಾಹಿತ್ಯ ಸಂಘದ ಸಂಚಾಲಕ ಡಾ. ಮಾಧವ ಸ್ವಾಗತಿಸಿದರು. ಉಪನ್ಯಾಸಕ ಸಂತೋಷ್ ವಂದಿಸಿದರು. ಶಿಲ್ಪಾಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News