ಮಂಗಳೂರು: ಆ.10-11ರಂದು ಬಿ.ವಿ. ಕಕ್ಕಿಲ್ಲಾಯ ಶತಾಬ್ಧಿ ಕಾರ್ಯಕ್ರಮ

Update: 2019-07-19 11:24 GMT
ಬಿ.ವಿ. ಕಕ್ಕಿಲ್ಲಾಯ

ಮಂಗಳೂರು, ಜು.19: ಮಾಜಿ ಸಂಸದ, ಸಿಪಿಐ ಹಿರಿಯ ನೇತಾರ ಬಿ.ವಿ. ಕಕ್ಕಿಲ್ಲಾಯ ಶತಾಬ್ಧಿ ಕಾರ್ಯಕ್ರಮವು ಆ. 10, 11ರಂದು ನಗರದ ಬಲ್ಮಠ ಸಹೋದಯದ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯಲಿದೆ.

ಆ. 10ರಂದು ಬೆಳಗ್ಗೆ 10 ಗಂಟೆಗೆ ಅಮರಜೀತ್ ಕೌರ್ ಕಾರ್ಯಕ್ರಮ ಉದ್ಘಾಟಿಸಿ ‘ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ರಾಷ್ಟ್ರ ನಿರ್ಮಾಣಗಳಲ್ಲಿ ದುಡಿಯುವ ವರ್ಗದ ಚಳುವಳಿಗಳ ಪಾತ್ರ’ದ ಕುರಿತು ಮಾತನಾಡಲಿದ್ದಾರೆ.

ಪೂರ್ವಾಹ್ನ 11ರಿಂದ 1 ಗಂಟೆಯವರೆಗೆ ‘ಕವಲು ದಾರಿಯಲ್ಲಿ ಭಾರತದ ಯುವ ಜನರು’ ಕುರಿತು ಡಾ. ಕನ್ಹಯ್ಯ ಕುಮಾರ್, ಅಮರಜೀತ್ ಕೌರ್, ಮಧ್ಯಾಹ್ನ 2ರಿಂದ 4ರವರೆಗೆ ‘ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕ್ರಾಂತಿ’ ಕುರಿತು ಕಳಲೆ ಪಾರ್ಥಸಾರಥಿ, ದಿನೇಶ್ ಅಮೀನ್ ಮಟ್ಟು, ಸಂಜೆ 4ರಿಂದ 6ರವರೆಗೆ ‘ದಮನಿತರ ಹೋರಾಟಗಳು: ಸಿದ್ಧಾಂತ ಮತ್ತು ಕ್ರಿಯೆ’ ಕುರಿತು ಪ್ರೊ. ಆನಂದ ತೇಲ್ತುಂಬ್ಡೆ, ಡಾ. ಕನ್ಹಯ್ಯ ಕುಮಾರ್ ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಅಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಆ.11ರಂದು ಬೆಳಗ್ಗೆ 10ರಿಂದ 10:30ರವರೆಗೆ ‘ಬಿವಿ ಕಕ್ಕಿಲ್ಲಾಯ: ಮಲಬಾರಿನಿಂದ ಕರ್ನಾಟಕ ವಿಧಾನಸಭೆಯವರೆಗೆ’ ಈ ಕುರಿತು ಡಾ. ಸಿದ್ಧನ ಗೌಡ ಪಾಟೀಲ್ ಮಾತನಾಡಲಿದ್ದಾರೆ. 10:30ರಿಂದ ಮಧ್ಯಾಹ್ನ 1ರವರೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ‘ಕರ್ನಾಟಕದಲ್ಲಿ ಭೂ ಸುಧಾರಣೆ: ಎಲ್ಲಿಂದ ಎಲ್ಲಿಗೆ ?’ಎಂಬ ವಿಷಯದಲ್ಲಿ ನಡೆಯುವ ಗೋಷ್ಠಿಯಲ್ಲಿ ಪ್ರೊ. ಮುಜಾಫರ್ ಅಸ್ಸಾದಿ, ಶ್ರೀಧರ ಪ್ರಭು, ಪಿ.ವಿ. ಲೋಕೇಶ್ ಮಾತನಾಡಲಿದ್ದಾರೆ.

ಮಧ್ಯಾಹ್ನ 2ರಿಂದ 4ರವರೆಗೆ ‘ಕನ್ನಡದಲ್ಲಿ ತತ್ವಶಾಸ್ತ್ರ, ಇತಿಹಾಸ ಮತ್ತು ಅರ್ಥಶಾಸ್ತ್ರದ ಬರಹಗಳು’ ಕುರಿತು ಡಾ. ಜಿ. ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯುವ ಗೋಷ್ಠಿಯಲ್ಲಿ ಡಾ. ಟಿ.ಎಸ್. ವೇಣು ಗೋಪಾಲ್, ಡಾ.ವಿಜಯ್ ಪೂಣಚ್ಚ ತಂಬಂಡ, ಕಳಲೆ ಪಾರ್ಥ ಸಾರಥಿ ಮಾತನಾಡಲಿದ್ದಾರೆ.

ಸಂಜೆ 4ರಿಂದ 6ರವರೆಗೆ ‘ಜಾತಿ, ಲಿಂಗಗಳನ್ನು ಮೀರಿ ಕಲೆಯ ಮರು ನಿರೂಪಣೆ’ ಕುರಿತು ಟಿ. ಎಂ. ಕೃಷ್ಣ ಮತ್ತು ನೂರ್ ಝಹೀರ್ ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

6 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಬಿನೋಯ್ ವಿಶ್ವಂ, ಸಾತಿ ಸುಂದರೇಶ್, ವಸಂತ ಕುಕ್ಯಾನ್, ಬಿ.ಕೆ. ಕೃಷ್ಣಪ್ಪ ಮಾತನಾಡಲಿದ್ದಾರೆ. ಸಂಜೆ 7 ಗಂಟೆಗೆ ವಿದ್ವಾನ್ ಟಿ.ಎಂ. ಕೃಷ್ಣ ಅವರಿಂದ ಸಂಗೀತ ಕಛೇರಿ ಜರುಗಲಿದೆ ಎಂದು ಬಿ.ವಿ. ಕಕ್ಕಿಲ್ಲಾಯ ಅವರ ಪುತ್ರ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News