ಮಂಗಳೂರು: ಪೊಲೀಸ್ ಫೋನ್ ಇನ್‌ ಕಾರ್ಯಕ್ರಮದಲ್ಲಿ ಬಸ್‌ಗಳ ಚಿಲ್ಲರೆ ಸಮಸ್ಯೆ!

Update: 2019-07-19 11:53 GMT

ಮಂಗಳೂರು, ಜು.19: ನಗರದ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಪ್ರಯಾಣಿಕರ ಜತೆ ಉತ್ತಮ ರೀತಿಯಲ್ಲಿ ವರ್ತಿಸುವ ಜತೆಗೆ ಬಾಕಿ ಚಿಲ್ಲರೆ ಹಣ ನೀಡಿ ಸಹಕರಿಸಬೇಕು. ಈ ಬಗ್ಗೆ ಬಸ್ ಮಾಲಕರು ತಮ್ಮ ಸಿಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ನೀಡಿದ್ದಾರೆ.

ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಮಾತನಾಡಿದರು.
ನಗರದಲ್ಲಿ ಸಂಚರಿಸುತ್ತಿರುವ ಕೆಲವು ಖಾಸಗಿ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಬಾಕಿ ಚಿಲ್ಲರೆ ಹಣ ಪಾವತಿ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಚಿಲ್ಲರೆ ಕೊಡದಿದ್ದರೆ ಅವರಿಗೆ ರಿಯಾಯಿತಿ ದರ ಸೌಲಭ್ಯ ನೀಡಲು ನಿರಾಕರಿಸುವ ನಿರ್ವಾಹಕರು ಪೂರ್ತಿ ಟಿಕೆಟ್ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರು ವ್ಯಕ್ತವಾಯಿತು.

ದೇರಳಕಟ್ಟೆಯಲ್ಲಿ ಆಟೋ ರಿಕ್ಷಾ ಚಾಲಕರು ಏಕ ರೂಪದ ನೀತಿ ಅನುಸರಿಸುತ್ತಿಲ್ಲ. ಆದ್ದರಿಂದ ಆಟೊ ದರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ನಾಗರಿಕರೊಬ್ಬರು ಒತ್ತಾಯಿಸಿದರು. ಈ ಬಗ್ಗೆ ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿ ರಿಕ್ಷಾ ಬಾಡಿಗೆ ದರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯುಕ್ತರು ಹೇಳಿದರು.

ಕಳೆದ ಎರಡು ದಿನಗಳಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಕೆಲವು ಬಸ್ಸುಗಳು ಬಲ್ಮಠ- ಅಥೇನಾ ಆಸ್ಪತ್ರೆ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೆ ಅನನುಕೂಲ ಆಗಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದರು. ಈ ಬಗ್ಗೆ ಪೊಲೀಸ್ ಸಿಬಂದಿಯನ್ನು ನೇಮಿಸಿ ಈ ಮಾರ್ಗದಲ್ಲಿ ಬಸ್ಸು ಸಂಚರಿಸುವುದನ್ನು ನಿಯಂತ್ರಿಸಲಾಗುವುದು ಎಂದು ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಜೋಕಟ್ಟೆಯಲ್ಲಿ ಸರಕಾರ ನಿವೇಶನ ಹಂಚಿಕೆ ಮಾಡಿದ್ದು, ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ನಾಗರಿಕರೊಬ್ಬರು ದೂರು ನೀಡಿದರು. ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ಉತ್ತರಿಸಿದರು.

ಸ್ಟೇಟ್ ಬ್ಯಾಂಕ್‌ನಿಂದ ಮರೋಳಿ ಮಾರ್ಗವಾಗಿ ಪಡೀಲ್- ಅಡ್ಯಾರ್‌ಗೆ ಸಂಚರಿಸುತಿದ್ದ ಖಾಸಗಿ ಸಿಟಿ ಬಸ್ 6 ತಿಂಗಳಿಂದ ಓಡಾಡುತ್ತಿಲ್ಲ; ಇದರಿಂದ ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಇಬ್ಬರು ನಾಗರೀಕರು ದೂರಿದರು. ಈ ಕುರಿತಂತೆ ಬಸ್ ಮಾಲಕರ ಸಂಘ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಬಿಜೈ ಮ್ಯೂಸಿಯಂ ಬಸ್ ತಂಗುದಾಣದಲ್ಲಿ ಬಸ್ ಶೆಲ್ಟರ್ ನಿರ್ಮಾಣ ಮಾಡ ಬೇಕು ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರೆ, ಪೊಲೀಸ್ ಕಂಟ್ರೋಲ್ ರೂಮ್‌ನಲ್ಲಿ ಸಾರ್ವಜನಿಕರ ಕರೆಗೆ ತತ್‌ಕ್ಷಣ ಸ್ಪಂದನೆ ಸಿಗುವುದಿಲ್ಲ ಎಂದು ಮತ್ತೋರ್ವರು ಆಕ್ಷೇಪಿಸಿದರು.

ಬಿಜೈ ವೃತ್ತ- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾರ್ಗದಲ್ಲಿ ಸ್ಪೀಡ್ ಬ್ರೇಕರ್ ಅಳವಡಿಸ ಬೇಕು ಎಂದು ಸಾರ್ವಜನಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿಪಿ ಮಂಜುನಾಥ ಶೆಟ್ಟಿ, ಇಲ್ಲಿ ಸ್ಪೀಡ್ ಬ್ರೇಕರ್ ಮಂಜೂರು ಆಗಿದೆ ಎಂದು ತಿಳಿಸಿದರು. ಆದಷ್ಟು ಬೇಗನೆ ಸ್ಪೀಡ್ ಬ್ರೇಕರ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಆಯುಕ್ತರು  ಟ್ರಾಫಿಕ್ ಪೊಲೀಸರಿಗೆ ಸೂಚಿಸಿದರು.

ಕುಂಟಿಕಾನ್ ಬಳಿ ಎ.ಜೆ. ಆಸ್ಪತ್ರೆ ಎದುರು ಕೆಲವರು ದ್ವಿಚಕ್ರ ವಾಹನಗಳನ್ನು ಅತೀ ವೇಗವಾಗಿ ಚಲಾಯಿಸುತ್ತಾರೆ ಎಂಬ ದೂರಿಗೆ ಈ ಬಗ್ಗೆ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ ಎಂದರು.

ಬಂಟ್ವಾಳದ ಟೋಲ್ ಕೇಂದ್ರ ಇರುವಲ್ಲಿ ರಸ್ತೆ ಗುಂಡಿ ನಿರ್ಮಾಣವಾಗಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ್ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ಬೆಂದೂರ್‌ನ ಮರ್ಕರಹಿಲ್ ಪ್ರದೇಶದಲ್ಲಿ ಸೊಳ್ಳೆ ಮತ್ತು ಬೀದಿ ನಾಯಿ ಹಾವಳಿ ಜಾಸ್ತಿಯಾಗಿದೆ ಎಂಬ ದೂರಿಗೆ, ಮಹಾನಗರ ಪಾಲಿಕೆಯ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು.

ಇದು 121ನೇ ಫೋನ್ ಇನ್ ಕಾರ್ಯಕ್ರಮವಾಗಿದ್ದು, ಒಟ್ಟು 30 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವಿನಯ್ ಎ. ಗಾಂವ್‌ಕರ್, ಟ್ರಾಫಿಕ್ ಇನ್ಸ್‌ಸ್ಪೆಕ್ಟರ್‌ಗಳಾದ ಅಮಾನುಲ್ಲ, ಮೋಹನ್ ಕೊಟ್ಟಾರಿ, ಗುರುದತ್ತ ಕಾಮತ್, ಸಬ್ ಇನ್ಸ್‌ಪೆಕ್ಟರ್ ಪೂವಪ್ಪ ಎಚ್. ಎಂ., ಆರ್.ಕೆ. ಗವಾರ್, ಎಎಸ್‌ಐ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೆತ್ತಮ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News