​ಡ್ರಗ್ಸ್ ಸಂಪೂರ್ಣ ನಿಯಂತ್ರಣಕ್ಕೆ ಸಹಕರಿಸಿ: ಸಂದೀಪ್ ಪಾಟೀಲ್

Update: 2019-07-19 11:56 GMT

ಮಂಗಳೂರು, ಜು. 19: ಡ್ರಗ್ಸ್ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ನಡೆಸುತ್ತಿದ್ದು ಸಂಪೂರ್ಣ ಮಟ್ಟಹಾಕಲು ಪೋಷಕರು, ಶಿಕ್ಷಕರ ಸಹಕಾರ ಅತ್ಯಗತ್ಯ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ನಗರದ ಕಮಿಷನರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಮುಖ್ಯವಾಗಿ ಈ ವಸ್ತುಗಳನ್ನು ಪೂರೈಕೆ ಮಾಡುತ್ತಿರುವವರನ್ನು ಬಂಧಿಸಲಾಗುತ್ತಿದೆ. ಸೇವನೆ ಮಾಡುವವರನ್ನು ಬಂಧಿಸಲಾಗಿದೆ. ಮುಖ್ಯವಾಗಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿರುವವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪತ್ತೆಯಾಗಿದ್ದು ಇದನ್ನು ಪೋಷಕರು, ಶಿಕ್ಷಕರು ಗಂಭೀರವಾಗಿ ಪರಿಗಣಿಬೇಕು ಎಂದು ಅವರು ಹೇಳಿದರು.

ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್‌ನಿಂದಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆ ವತಿಯಿಂದಲೂ ಮಾಡಲಾಗುತ್ತಿದೆ. ಶಾಲಾ ಕಾಲೇಜು ಆಡಳಿತ ಮಂಡಳಿಯೂ ಈ ಬಗ್ಗೆ ಗಮನ ಹರಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಡ್ರಗ್ಸ್ ಹಾವಳಿಗೆ ಸಿಲುಕುತ್ತಿರುವುದು ವೈದ್ಯಕೀಯ ತಪಾಸಣೆಯ ಬಳಿಕವಷ್ಟೆ ದೃಢಪಡುತ್ತದೆ. ಹಾಗಾಗಿ ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಸಹಕಾರ ದೊರತರೆ ಈ ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯ ಎಂದವರು ಹೇಳಿದರು.

ಸಕ್ಕರೆ, ಉಪ್ಪು, ಹುಲ್ಲಿನ ಮಾದರಿಯಲ್ಲಿ ಡ್ರಗ್ಸ್
ಮುಖ್ಯವಾಗಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಮೇಲೆ ನಿಗಾಯಿಟ್ಟು ಬ್ಯಾಗ್, ಬೈಕ್, ಬೆಡ್ ರೂಮುಗಳನ್ನು ತಪಾಸಣೆ ನಡೆಸಬೇಕು. ಸಕ್ಕರೆ, ಉಪ್ಪು (ಎಂಡಿಎಂ) ಹುಲ್ಲು (ಗಾಂಜಾ) ಮಾದರಿಯ ನಿಷೇಧಿತ ಮಾದಕ ವಸ್ತುಗಳು ಅಥವಾ ಯಾವುದೇ ಅನುಮಾನಾಸ್ಪದ ಸೊತ್ತುಗಳು ಕಂಡು ಬಂದಲ್ಲಿ ಪೊಲೀಸರಿಗೆ ತಿಳಿಸಬೇಕು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News