ಶಿರೂರು ಸ್ವಾಮೀಜಿಯ ಮರಣ ಸ್ವಾಭಾವಿಕ ಅಲ್ಲ: ನ್ಯಾಯವಾದಿ ರವಿಕಿರಣ್

Update: 2019-07-19 13:41 GMT

ಉಡುಪಿ, ಜು.19: ಶಿರೂರು ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಕೆಎಂಸಿಯ ತಜ್ಞ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ವಾಮೀಜಿಯ ರಕ್ತ, ಮೂತ್ರ, ಉದರಾಂಗಗಳಲ್ಲಿ ವಿಷದ ಅಂಶ ಪತ್ತೆ ಯಾಗಿರುವುದಾಗಿ ಉಲ್ಲೇಖಿಸಲಾಗಿದ್ದು, ಈ ದಾಖಲೆಗಳು ಸ್ವಾಮೀಜಿಯ ಸಾವು ಸ್ವಾಭಾವಿಕ ಅಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ತಿಳಿಸಿದ್ದಾರೆ.

ಉಪ್ಪೂರಿನ ಸ್ಪಂದನಾ ವಿಶೇಷ ಮಕ್ಕಳ ಶಾಲೆಯಲ್ಲಿ ಶುಕ್ರವಾರ ನಡೆದ ಶಿರೂರು ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸ್ವಾಮೀಜಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಗಿನ ಕಾರ್ಕಳ ಪ್ರಭಾರ ಡಿವೈಎಸ್ಪಿಯಾಗಿದ್ದ ಪ್ರಕರಣದ ತನಿಖಾಧಿಕಾರಿ ಬೆಳ್ಳಿಯಪ್ಪ 2018ರ ಆ.28ರಂದು ಕುಂದಾಪುರ ಉಪವಿಭಾಗ ಸಹಾಯಕ ಆಯುಕ್ತರಿಗೆ ಸಲ್ಲಿಸಿದ್ದ 1115 ಪುಟಗಳ ಅಂತಿಮ ತನಿಖಾ ವರದಿಯನ್ನು ಉಲ್ಲೇಖಿಸಿ ಅವರು ಮಾತನಾಡುತಿದ್ದರು.

ಟೋಕ್ಸಿಕೋಲಜಿ(ವಿಷ ವಿಜ್ಞಾನ) ವರದಿಯ ಪ್ರಕಾರ ಸ್ವಾಮೀಜಿಯ ರಕ್ತ, ಮೂತ್ರ, ಉದರಾಂಗಗಳಲ್ಲಿ ವಿಷಗಳು ಕಂಡು ಬಂದಿವೆ. ಇದರ ಉಲ್ಲೇಖವನ್ನು ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಮಾಡಲಾಗಿದೆ. ರಕ್ತ ಮತ್ತು ಉದರ ಅಂಗದಲ್ಲಿ ಆರ್ಗನೋ ಪ್ರಾಸ್ಪೋರಸ್ ಮತ್ತು ಮೂತ್ರದಲ್ಲಿ ಡೆಂಜೋ ಡಯಜಿನ್ ಪೈನ್ ಎಂಬ ವಿಷ ಕಂಡು ಬಂದಿರುವುದಾಗಿ ಕೆಎಂಸಿಯ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಫಾರೆನ್ಸಿಕ್ ತಜ್ಞರಾದ ಡಾ.ಅಶ್ವಿನ್ ಕುಮಾರ್ ಹಾಗೂ ಡಾ.ಅನಿತಾ ಎಸ್.ನೀಡಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ ಎಂದರು.

ವಿಷದ ಹೇಳಿಕೆ ಬಗ್ಗೆ ಸಮರ್ಥನೆ: ಸ್ವಾಮೀಜಿ ಮೃತಪಟ್ಟ ಜು.19ರಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿಕೆ ನೀಡಿ ಸ್ವಾಮೀಜಿಯ ರಕ್ತದಲ್ಲಿ ವಿಷದ ಅಂಶ ಪತ್ತೆಯಾಗಿದೆ ಎಂದು ತಿಳಿಸಿದ್ದರು. ಈ ಹೇಳಿಕೆಯನ್ನು ಅವರು ಆ.13ರಂದು ತನಿಖಾಧಿಕಾರಿ ಜೊತೆ ನಡೆಸಿದ ಪತ್ರ ವ್ಯವಹಾರದಲ್ಲೂ ಸಮರ್ಥಿಸಿಕೊಂಡಿದ್ದರು ಎಂದು ರವಿಕಿರಣ್ ಮುರ್ಡೇಶ್ವರ ಬಹಿರಂಗ ಪಡಿಸಿದರು.

ಡಾ.ಅವಿನಾಶ್ ಶೆಟ್ಟಿಗೆ ತನಿಖಾಧಿಕಾರಿಗಳು ನೋಟೀಸ್ ನೀಡಿ ನೀವು ಯಾವ ಆಧಾರದಲ್ಲಿ ಸ್ವಾಮೀಜಿ ರಕ್ತದಲ್ಲಿ ವಿಷ ಇದೆ ಎಂಬುದಾಗಿ ಹೇಳಿಕೆ ನೀಡಿದ್ದೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಡಾ.ಅವಿನಾಶ್ ಶೆಟ್ಟಿ ಪ್ರತಿಕ್ರಿಯಿಸಿ, ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮಾನ್ಯತೆ ಪಡೆದ ಟಿನ್ ಲೇಯರ್ ಕ್ರೋಮೊ ಟೋಗ್ರಫಿ ಪರೀಕ್ಷೆ ಮೂಲಕ ವಿಷದ ಅಂಶ ಪತ್ತೆ ಹಚ್ಚಿ ಹೇಳಿಕೆ ನೀಡಿದ್ದೇವೆ ಹೊರತು ಯಾವುದೇ ಉಹಾಪೋಹಗಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಇವೆಲ್ಲವು ಅಂತಿಮ ತನಿಖಾ ವರದಿಯಲ್ಲಿ ಉಲ್ಲೇಖಿತವಾಗಿವೆ ಎಂದರು.

ಎಫ್‌ಎಸ್‌ಎಲ್ ಪರೀಕ್ಷೆ ವಿಳಂಬ: ಜು.19ರಂದು ಮೃತಪಟ್ಟ ಸ್ವಾಮೀಜಿಯ ಉದರಾಂಗ ಮತ್ತು ಮಾದರಿಗಳನ್ನು ಪರೀಕ್ಷೆಗಾಗಿ ಪೊಲೀಸರು ಜು.31ರ ವರೆಗೆ ಸಮೀಪದ ಮಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಯೇ ಇರಲಿಲ್ಲ. ಹೀಗೆ 11 ದಿನಗಳ ಕಾಲ ಉದರಾಂಗವನ್ನು ವಿನಾ ಕಾರಣ ಇಟ್ಟುಕೊಳ್ಳಲಾಗುತ್ತದೆ.

ಆ.1ರಂದು ತಲುಪಿದ ಉದರಾಂಗಗಳ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಆ.10ರಂದು ನಡೆಸಲಾಗುತ್ತದೆ. ಹೀಗೆ 20 ದಿನಗಳ ನಂತರ ಪ್ರಯೋಗಾಲಯದಲ್ಲಿ ಉದರಾಂಗದಲ್ಲಿ ವಿಷ ಇದೆಯೇ ಎಂಬುದರ ಬಗ್ಗೆ ಪರೀಕ್ಷೆ ನಡೆಸಲಾಯಿತು. ಇದರಿಂದ ವಿಷ ತನ್ನ ವಿಷತ್ವವನ್ನು ಕಳೆದುಕೊಂಡ ಪರಿಣಾಮ ಈ ಪರೀಕ್ಷೆಯಲ್ಲಿ ವಿಷ ಕಂಡು ಬರುವುದಿಲ್ಲ ಎಂದು ವರದಿ ನೀಡಲಾಗುತ್ತದೆ.

ಅದೇ ರೀತಿ ಸ್ವಾಮೀಜಿಯ ಕಿಡ್ನಿಯಲ್ಲಿ ಗಾಯ ಆಗಿದೆಯೇ ಹೊರತು ಕಿಡ್ನಿ ರೋಗಗ್ರಸ್ತ ಆಗಿರುವುದಿಲ್ಲ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಹೊಟ್ಟೆಯ ನಾಳದಲ್ಲಿ ಆಗಿರುವ ರಕ್ತಸ್ರಾವದಿಂದ ಸ್ವಾಮೀಜಿ ಮೃತಪಟ್ಟಿದ್ದಾರೆ ಎಂಬುದಾಗಿ ಸಾವಿಗೆ ಕಾರಣವನ್ನು ಹೇಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಂತಿಮ ವರದಿ ಸರಿಯಲ್ಲ: ವಿಷ ಕಂಡುಬಂದ ಮರಣೋತ್ತರ ಪರೀಕ್ಷೆ ಹಾಗೂ 20 ದಿನಗಳ ನಂತರ ವಿಳಂಬವಾಗಿ ಬಂದ ಎಫ್‌ಎಸ್‌ಎಲ್ ವರದಿಯನ್ನು ಕ್ರೋಡೀಕರಿಸಿ ತನಿಖಾಧಿಕಾರಿಗಳು ನೀಡಿದ ಅಂತಿಮ ತನಿಖಾ ವರದಿಯಲ್ಲಿ ಸ್ವಾಮೀಜಿಯ ಸಾವು ಸ್ವಾಭಾವಿಕ ಮರಣ ಎಂಬುದಾಗಿ ಉಲ್ಲೇಖಿಸಿ, ಇಡೀ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಸ್ವಾಮೀಜಿಯ ಸುತ್ತ ಇದ್ದ ವಿವಾದ, ನ್ಯಾಯಾಲಯದ ಮೆಟ್ಟಿಲೇರಲು ಮಾಡಿರುವ ನಿರ್ಧಾರ, ಕೆವಿಯಟ್ ಹಾಕಿರುವುದು ಮತ್ತು ದೂರು ಕೊಡಲು ಮುಂದಾಗಿರುವ ಸನ್ನಿವೇಶ ಹಾಗೂ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವಿಷ ಇರುವುದಾಗಿ ಹೇಳಿರುವುದರಿಂದ ಅಂತಿಮ ತನಿಖಾ ವರದಿಯಲ್ಲಿ ಸ್ವಾಮೀಜಿ ಸಾವು ಸ್ವಾಭಾವಿಕ ಮರಣ ಎಂದು ಹೇಳಿರುವುದು ಸೂಕ್ತ ಅಲ್ಲ. ಇದು ಸ್ವಾಭಾವಿಕ ಮರಣ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಈ ದಾಖಲೆಗಳು ಸಾಕಾಗುತ್ತವೆ ಎಂದು ರವಿಕಿರಣ್ ಮುರ್ಡೇಶ್ವರ ಹೇಳಿದರು.

ಇಂತಹ ಕೇಸ್‌ಗಳಿಗೆ ಕಾಲದ ಮಿತಿ ಇಲ್ಲ!
ಸ್ವಾಮೀಜಿ ಸಾವಿನ ಪ್ರಕರಣ ಇನ್ನೂ ಹಳ್ಳ ಹಿಡಿದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಜೀವಂತವಾಗಿವೆ. ಯಾವುದೇ ಕೊಲೆ ಹಾಗೂ ಅನುಮಾನಾಸ್ಪದ ಸಾವಿನ ಪ್ರಕರಣಗಳಿಗೆ ಕಾಲದ ಪರಿಮಿತಿ ಎಂಬುದಿಲ್ಲ. ಯಾವತ್ತೂ ಕೂಡ ದೂರು ನೀಡಿ ಮತ್ತೆ ಜೀವಂತಗೊಳಿಸಬಹುದು. ಪ್ರಕರಣವನ್ನು ಮತ್ತೆ ಮುಂದುವರಿಸಬೇಕಿದ್ದರೆ ಹೈಕೋರ್ಟ್‌ಗೆ ರಿಟ್ ಹಾಕಬಹುದು ಅಥವಾ ಈಗಲೂ ಪೊಲೀಸ್ ಠಾಣೆಗೆ ದೂರು ನೀಡಬಹುದು ಎಂದು ವಕೀಲ ರವಿ ಕಿರಣ್ ಮುರ್ಡೇಶ್ವರ ತಿಳಿಸಿದರು.

ಮರಣೋತ್ತರ ಪರೀಕ್ಷಾ ವರದಿ ಮತ್ತು ವೈದ್ಯಕೀಯ ದಾಖಲೆಗಳಲ್ಲಿ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತವೆ. ಈ ಪ್ರಕರಣದ ಎಲ್ಲವನ್ನು ಕತ್ತಲೆಯಲ್ಲಿ ಇಡಲಾಗಿದೆ. ಪೊಲೀಸರು ಎಲ್ಲವನ್ನು ಗುಪ್ತವಾಗಿ ಇರಿಸಿದ್ದರು. ಒಟ್ಟಾರೆ ಶಿರೂರು ಸ್ವಾಮೀಜಿ ಸಾವು ಅತ್ಯಂತ ರಹಸ್ಯ ಮತ್ತು ನಿಗೂಢತೆಯಿಂದ ಕೂಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News