×
Ad

ಸೋಮವಾರದಿಂದ ಜಿಲ್ಲಾಡಳಿತಕ್ಕೆ ಏನೂ ಮಾಡಲಾಗದು: ಜಿಲ್ಲಾಧಿಕಾರಿ

Update: 2019-07-19 19:42 IST

ಮಂಗಳೂರು, ಜು.19: ಸುರತ್ಕಲ್ ಟೋಲ್‌ಗೇಟ್ ಬಳಿ ಸ್ಥಳೀಯರಿಗೆ ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಸೋಮವಾರದವರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ರವಿವಾರದವರೆಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಸ್ಥಳೀಯರಿಗೆ ವಿನಾಯಿತಿ ನೀಡುವ ಕುರಿತಂತೆ ಲಿಖಿತ ಆದೇಶ ಬಾರದಿದ್ದರೆ ಸೋಮವಾರದಿಂದ ಜಿಲ್ಲಾಡಳಿತ ಏನೂ ಮಾಡಲು ಸಾಧ್ಯವಾಗದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ರಾ.ಹೆದ್ದಾರಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಯಾವುದೇ ಉತ್ತರ ಇನ್ನೂ ಬಂದಿಲ್ಲ. ಸೋಮವಾರದೊಳಗೆ ಸಂಬಂಧಪಟ್ಟ ಇಲಾಖೆಯಿಂದ ನಿರ್ದೇಶನ ಬಾರದಿದ್ದರೆ ಪೊಲೀಸ್ ರಕ್ಷಣೆಯೊಂದಿಗೆ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ನಷ್ಟಕ್ಕೆ ಹೆದ್ದಾರಿ ಇಲಾಖೆ ಜಿಲ್ಲಾಡಳಿತವನ್ನೇ ಹೊಣೆಯನ್ನಾಗಿಸಲಿದೆ ಎಂದು ಜಿಲ್ಲಾಧಿಕಾರಿ ಹತಾಶೆ ವ್ಯಕ್ತಪಡಿಸಿದರು.

ಈ ಟೋಲ್ ತುಂಬಾ ಹಳೆಯ ಪ್ರಾಜೆಕ್ಟ್ ಆಗಿರುವುದರಿಂದ ತಾವು ಈಗಾಗಲೇ ನಿರ್ವಹಣೆಯನ್ನು ಮಾಡಿರುವುದಾಗಿ ಹೆದ್ದಾರಿ ಇಲಾಖೆಯು ದಾಖಲೆಗಳನ್ನು ತೋರಿಸುತ್ತಾರೆ. ಹಾಗಾಗಿ ಟೋಲ್ ಸಂಗ್ರಹ ವಿನಾಯಿತಿಗೆ ಇಲಾಖೆಯಿಂದಲೇ ಆದೇಶ, ನಿರ್ದೇಶನ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸ್ಯಾಂಡ್ ಬಜಾರ್ ಆ್ಯಪ್‌ಗೆ ಉತ್ತಮ ಸ್ಪಂದನೆ: ಜಿಲ್ಲಾಧಿಕಾರಿ
ಜಿಲ್ಲಾಡಳಿತದ ವತಿಯಿಂದ ಸಾರ್ವಜನಿಕರಿಗೆ ಮರಳನ್ನು ಸರಕಾರ ನಿಗದಿ ಪಡಿಸಿದ ದರದಲ್ಲಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಆರಂಭಿಸಲಾದ ಸ್ಯಾಂಡ್ ಬಜಾರ್ ಆ್ಯಪ್‌ಗೆ ಉತ್ತಮ ಸ್ಪಂದನೆ ದೊರಕಿದೆ. 1000ಕ್ಕೂ ಅಧಿಕ ಆರ್ಡರ್‌ಗಳು ಬುಕ್ ಆಗಿವೆ ಎಂದು ಜಿ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ತಿಳಿಸಿದರು.

ಸಾಮಾನ್ಯ ಜನರಿಗೆ ಸರಕಾರಿ ದರದಲ್ಲಿ ಮರಳು ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಈ ಆ್ಯಪ್ ಆರಂಭಿಸಲಾಗಿದೆ. ಆದರೆ ಇದೀಗ ಕೆಲವರು ಮತ್ತೆ ಮತ್ತೆ ಆ್ಯಪ್‌ನಲ್ಲಿ ಮರಳು ಬುಕ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಅಂಶವೂ ಗಮನಕ್ಕೆ ಬಂದಿದೆ. ಹಾಗಾಗಿ ಮರಳು ಬೇಕಾದವರು ಪ್ರಾಜೆಕ್ಟ್ ವಿವರ, ವಿಳಾಸ ಹಾಗೂ ಲೈಸೆನ್ಸ್ ಮಾಹಿತಿಯನ್ನು ಒದಗಿಸಬೇಕು. ಮಾತ್ರವಲ್ಲದೆ, ಮರಳು ಪಡೆಯುವವರಿಂದ ಈ ಬಗ್ಗೆ ದೃಢೀಕರಣ ಪತ್ರವನ್ನೂ ಪಡೆಯುತ್ತೇವೆ. ಮುಂದೆ ಸಿಆರ್‌ಝೆಡ್ ವ್ಯಾಪ್ತಿಯ ಮರಳು ವಿತರಣೆಯನ್ನೂ ಈ ಪೋರ್ಟಲ್ ಮೂಲಕವೇ ಬುಕ್ ಮಾಡಿ ಸರಕಾರದ ದರದಲ್ಲಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News