ಶಿರೂರು ಶ್ರೀ ಪುಣ್ಯತಿಥಿಯನ್ನು ಮಡಿ ಮೈಲಿ ಮುಕ್ತ ದಿನವನ್ನಾಗಿ ಆಚರಣೆ: ಕೇಮಾರು ಶ್ರೀ

Update: 2019-07-19 15:04 GMT

ಉಡುಪಿ, ಜು.19: ಕೆಳವರ್ಗದವರನ್ನು ಪ್ರೀತಿಸುತ್ತಿದ್ದ ಶಿರೂರು ಶ್ರೀಲಕ್ಷ್ಮೀ ವರತೀರ್ಥ ಸ್ವಾಮೀಜಿ ಪುಣ್ಯತಿಥಿಯನ್ನು ಮಡಿ ಮೈಲಿಗೆ ಮುಕ್ತ ದಿನವನ್ನಾಗಿ ಆಚರಿಸಲಾಗುವುದು ಎಂದು ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.

ಶಿರೂರು ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾ ವನಸ್ಥರಾಗಿ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಶಿರೂರು ಶ್ರೀ ಅಭಿಮಾನಿಗಳ ವತಿಯಿಂದ ಉಪ್ಪೂರಿನಲ್ಲಿರುವ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶುಕ್ರವಾರ ಆಯೋಜಿಸಲಾದ ಶಿರೂರು ಸ್ವಾಮಿಗಳ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡುತಿದ್ದರು.

ಶಿರೂರು ಸ್ವಾಮೀಜಿಗೆ ಅನ್ಯಾಯ ಮಾಡಿದವರ ವಿರುದ್ಧ ನಮಗೆ ಆಕ್ರೋಶ ಇದೆಯೇ ಹೊರತು ಅವರ ಮೇಲೆ ಯಾವುದೇ ಧ್ವೇಷ ಇಲ್ಲ. ಇದು ಪೂರ್ವಗ್ರಹ ಪೀಡಿತ ಹೋರಾಟ ಅಲ್ಲ. ಸ್ವಾಮೀಜಿಗೆ ಅನ್ಯಾಯ ಮಾಡಿದವರಿಗೆ ಧಾರ್ಮಿಕವಾಗಿಯಾದರೂ ಶಿಕ್ಷೆ ಆಗುವಂತೆ ಮಾಡುತ್ತೇನೆ. ನನ್ನ ಉಸಿರು ಇರುವವರೆಗೆ ನಾನು ಬಿಡುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಶಿರೂರು ಸ್ವಾಮೀಜಿ ಜೀವಂತವಾಗಿರುವಾಗ ನೀಡಿದ ದೂರಿನ ಸಂಬಂಧ ಪೊಲೀಸರು ಒಬ್ಬರನ್ನು ಕೂಡ ವಿಚಾರಣೆಗೆ ಒಳಪಡಿಸಿಲ್ಲ. ಅದರ ಬದಲು ಅಮಾಯಕರಿಗೆ ವಿಚಾರಣೆ ಹೆಸರಿನಲ್ಲಿ ಹಿಂಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಮಂಗಳೂರಿನ ಪತ್ರಕರ್ತರೊಬ್ಬರು ಶಿರೂರು ಸ್ವಾಮೀಜಿ ಆತ್ಮ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಈಗಾಗಲೇ ಶೇ.50ರಷ್ಟು ಬರವಣಿಗೆ ಮುಗಿದಿದೆ. ತಮ್ಮಲ್ಲಿರುವ ಸ್ವಾಮೀಜಿಗೆ ಸಂಬಂಧಿಸಿದ ದಾಖಲೆ, ಫೋಟೋಗಳು, ವಾಯ್ಸ್ ಸಂದೇಶಗಳನ್ನು ಕಳುಹಿಸಿಕೊಡಬೇಕು. ಶಿರೂರು ಸ್ವಾಮೀಜಿ ಹೇಳಿದ ಬೇರೆಯವರ ಮುಖವಾಡದ ಬದುಕುಗಳು, ಲ್ಯಾಂಡ್ ಮಾಫಿಯಾ, ಅಸಹಜ ಸಾವು ಸೇರಿ ದಂತೆ ಸಮಗ್ರವಾದ ಗ್ರಂಥವನ್ನು ಆದಷ್ಟು ಬೇಗ ಹೊರಗಡೆ ಬರಲಿದೆ ಎಂದರು.

ವೇದಿಕೆಯಲ್ಲಿ ಉದ್ಯಮಿ ಮನೋಹರ್ ಶೆಟ್ಟಿ, ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ನಗರಸಭೆ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪತ್ರಕರ್ತ ಶ್ರೀಕಾಂತ್ ಶೆಟ್ಟಿ, ಭಾಸ್ಕರ ಗುಂಡಿಬೈಲು, ನವೀನ್ ರಾವ್ ಉಪಸ್ಥಿತರಿದ್ದರು.

ಲಾತಾವ್ಯ ಆಚಾರ್ಯ ಸ್ವಾಗತಿಸಿದರು. ರಾಧಾಕೃಷ್ಣ ಶೆಟ್ಟಿ ದೊಡ್ಡಣಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ವ್ಯವಸ್ಥಾಪಕ ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಬಟ್ಟೆಯನ್ನು ವಿತರಿಸಲಾಯಿತು. ಕೊಡಂಕೂರು ಪಾಂಡುರಂಗ ಭಜನಾ ಮಂಡಳಿಯ ಶಿವಾನಂದ ಮತ್ತು ತಂಡದಿಂದ ಭಜನೆ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News