ಬಿರುಸುಗೊಂಡ ಮುಂಗಾರು: ಬಂಟ್ವಾಳದ ವಿವಿಧೆಡೆ ಮನೆಗಳಿಗೆ ಹಾನಿ-ನಷ್ಟ

Update: 2019-07-19 15:29 GMT

ಬಂಟ್ವಾಳ, ಜು. 19: ಆಷಾಢ ಆರಂಭವಾಗುತ್ತಿದ್ದಂತೆಯೇ ಮುಂಗಾರು ಬಿರುಸುಗೊಂಡಿದೆ. ಗುರುವಾರ ರಾತ್ರಿಯಿಂದ ಬಂಟ್ವಾಳ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಶುಕ್ರವಾರ ಎಡೆಬಿಡದೆ ಮಳೆ ಸುರಿದಿದ್ದು, ಪುರಸಭಾ ವ್ಯಾಪ್ತಿಯ ಕೆಲವೆಡೆ ಅವಘಡಗಳು ಸಂಭವಿದ್ದು, ನಷ್ಟ ಉಂಟಾಗಿದೆ. 

ಬಂಟ್ವಾಳ ಜಕ್ರಿಬೆಟ್ಟು ಬೈಪಾಸ್ ರಸ್ತೆ ಬಳಿಯ ಜೆ. ಮುಹಮ್ಮದ್ ಎಂಬವರ ಮನೆಗೆ ಪಕ್ಕದ ಆವರಣ ಗೋಡೆಯೊಂದು ಬಿದ್ದು ಮನೆ ಭಾಗಶಃ ಹಾನೀಗೀಡಾಗಿದೆ. ಮೇಲ್ಭಾಗದ ಖಾಲಿ ನೀವೇಶನಕ್ಕೆ ಮಣ್ಣು ತುಂಬಲಾಗಿದ್ದು, ಅದು ಮಳೆಗೆ ಮೆದುಗೊಡು ಆವರಣಗೊಂಡೆ ಸಹಿತ ಮನೆ ಮೇಲೆ ಬಿದ್ದಿರುವುದರಿಂದ ಗೋಡೆ ಬಿರುಕು ಬಿಟ್ಟಿದೆ. ಮುಂಜಾನೆ 7 ಗಂಟೆಯ ವೇಳೆಗೆ ಘಟನೆ ನಡೆದಿದ್ದು, ಮನೆಮಂದಿ ಆತಂಕಗೊಂಡಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಸ್ಥಳಕ್ಕೆ ಪುರಸಭಾ ಚುನಾಯಿತ ಜನಪ್ರತಿನಿಧಿಗಳಾದ ಗಂಗಾಧರ ಪೂಜಾರಿ, ಜನಾರ್ದನ ಚೆಂಡ್ತಿಮಾರ್ ಭೇಟಿ ನೀಡಿದರು. ಪುರಸಭಾ ಕಿರಿಯ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಪರಿಶೀಲನೆ ನಡೆಸಿದರು. 

ಜಕ್ರಿಬೆಟ್ಟು ನೇತ್ರಾವತಿ ನದಿ ಬಳಿಯ ಪಿಯೂಸ್ ಮ್ಯಾಕ್ಸೆಲ್ ಸಿಕ್ವೇರಾ ಎಂಬವರ ಮನೆ ಹಿಂಭಾಗದ ಆವರಣಗೋಡೆ ಕುಸಿದು ಬಿದ್ದು ನಷ್ಟ ಉಂಟಾಗಿದೆ. ಅವರ ಮನೆಯ ಹಿಂಭಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯೊಂದು ನಡೆಯುತ್ತಿದ್ದು, ಇತ್ತೀಚೆಗಷ್ಟೇ ಆವರಣ ಗೋಡೆ ನಿರ್ಮಿಸಿದ್ದರು ಎನ್ನಲಾಗಿದೆ.

ಬಂಟ್ವಾಳದ ಕೊಟ್ರಮಣ ಗಂಡಿ ಎಂಬಲ್ಲಿ ಬೃಹತ್ ದೇವದಾರ ಮರವೊಂದು ಬುಡ ಸಮೇತ ಪುರಸಭೆಯ ಪ್ರಯಾಣಿಕರ ತಂಗುದಾಣ ಹಾಗೂ ಶೌಚಾಲಯದ ಮೇಲೆ ಉರುಳಿ ಬಿದ್ದಿದೆ. ಸಜೀಪನಡು ಗ್ರಾಮದ ಶಶಿಕಲಾ ಎಂಬವರ ಮನೆಗೆ ಗುಡ್ಡ ಜರಿದು ಹಾನಿಯಾಗಿದೆ. ಬಿಮೂಡ ಗ್ರಾಮದ ಕೊಡಂಗೆ ಎಂಬಲ್ಲಿಯ ಸುಜಾತ ಸುವರ್ಣ  ಹಾಗೂ ವಾಲ್ಟರ್ ಕಾಸ್ತಲಿನೋ ಎಂಬವರ ಮನೆಯ ಆವರಣ ಗೋಡೆ ಕುಸಿದಿದೆ. ಕುರ್ಸುಗುಡ್ಡೆ ಎಂಬಲ್ಲಿ ಚಂದಪ್ಪ ಎಂಬವರ ಮನೆಯ ಹತ್ತಿರದ ಗುಡ್ಡೆ ಮನೆಯ ಅಂಗಳಕ್ಕೆ ಬಿದ್ದಿದೆ. ಇಡ್ಕಿದು ಗ್ರಾಮದ ಕೊಪ್ಪಳ ಎಂಬಲ್ಲಿ ರುಕ್ಮ ಗೌಡ ಎಂಬವರ ಪಕ್ಕಾ ಮನೆ ಹಾಗೂ 2 ತೆಂಗಿನ ಮರಗಳ ಮೇಲೆ ಬೃಹದಾಕಾರದ ಮಾವಿನ ಮರವೊಂದು ಬಿದ್ದು ತೆಂಗಿನ ಮರಗಳು ಮುರಿದು ಬಿದ್ದಿದೆ. ಇದರಿಂದ ಮನೆಯು ಭಾಗಶಃ ಹಾನಿಯಾಗಿ, ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News