ಪರಿಸರ ರಕ್ಷಣೆಯ ಬಗ್ಗೆ ಜಾಗೃತರಾಗಿ: ದೇವರಾಜ ಪಾಣ

Update: 2019-07-19 16:34 GMT

ಉದ್ಯಾವರ, ಜು.19: ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುವ ಇಂದಿನ ದಿನಗಳಲ್ಲಿ ನಾವು, ಮುಖ್ಯವಾಗಿ ವಿದ್ಯಾರ್ಥಿಗಳು ಪರಿಸರವನ್ನು ರಕ್ಷಿಸಲು ಜಾಗೃತರಾಗಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳು ಭಯಾನಕವಾಗಲಿವೆ. ಹೀಗಾಗಿ ಗಿಡ ಮರಗಳನ್ನು ನೆಟ್ಟು ಬೆಳಸಿ ರಕ್ಷಿಸುವ ಕೆಲಸ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಉಡುಪಿ ಅರಣ್ಯ ರಕ್ಷಕರಾದ ದೇವರಾಜ ಪಾಣ ಅಭಿಪ್ರಾಯ ಪಟ್ಟಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಪಿತ್ರೋಡಿ ಸ್ಮಾರ್ಟ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಅವರು ಮಾತನಾಡಿದರು. ಗಿಡಮರಗಳ ರಕ್ಷಣೆ ಎಂದರೆ ಅದು ಭೂಮಿಯ ಮೇಲೆ ಜೀವಿಸುವ ಸಕಲ ಜೀವಸಂಕುಲಗಳ ರಕ್ಷಣೆ. ಗಿಡ ಮರಗಳ ರಕ್ಷಣೆಯಿಂದ ಜೀವ ಸಂಕುಲಗಳ ಜೀವನ ಸಮತೋಲನವಾಗಿ ನಾವೆಲ್ಲರೂ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದರು.

ಅಭಿವೃದ್ಧಿಗೆ ಅನಿವಾರ್ಯವಾದಾಗ ಮರಗಳನ್ನು ಕಡಿಯೋಣ ಆದರೆ ಕಡಿದ ಒಂದು ಮರದ ಬದಲಾಗಿ ಹತ್ತು ಮರಗಳನ್ನು ನೆಟ್ಟು ಪರಿಸರದ ಸಮತೋಲನ ವನ್ನು ಕಾಪಾಡೋಣ. ಪರಿಸರ ರಕ್ಷಣೆ ನಮ್ಮ ಮುಖ್ಯ ಕಾಳಜಿಯಾಗಲಿ ಎಂದು ದೇವರಾಜ ಪಾಣ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಮಾರ್ಟ್ ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಯು. ಮಹೇಶ್ ಮಾತನಾಡಿ, ಇದು ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ಇರುವ ಕಾರ್ಯಕ್ರಮ. ಸಂಸ್ಥೆ ಇಲ್ಲಿ ವಿದ್ಯಾರ್ಥಿಗಳಿಗೆ ಗಿಡವನ್ನು ವಿತರಿಸುವುದು ಮಾತ್ರವಲ್ಲ, ಒಂದು ವರ್ಷದಲ್ಲಿ ಚೆನ್ನಾಗಿ ಬೆಳೆಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ಕೊಡುವ ಕಾರ್ಯ ಅಪರೂಪದ ಚಿಂತನೆ ಎಂದರು.

ಅಧ್ಯಕ್ಷತೆಯನ್ನು ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಮತ್ತು ಉಪಾಧ್ಯಕ್ಷ ರಿಯಾಜ್ ಪಳ್ಳಿ ಭಾಗವಹಿಸಿದ್ದರು.

ಸ್ಮಾರ್ಟ್ ಇಂಡಿಯನ್ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಅರ್ಚನಾ ಎ. ಬಂಗೇರ ಸ್ವಾಗತಿಸಿದರು. ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷ ತಿಲಕ್‌ರಾಜ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿ,ಶಿಕ್ಷಕಿದೀಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸುಮಾರು 500 ಸಾಗುವಾನಿ ಮತ್ತು ವಿವಿಧ ಜಾತಿಯ ಗಿಡಗಳನ್ನು ವಿತರಿಸಲಾಯಿತು. ಈ ಗಿಡಗಳನ್ನು ಒಂದು ವರ್ಷದ ಅವಧಿಯಲ್ಲಿ ಚೆನ್ನಾಗಿಬೆಳೆಸಿದವರಿಗೆ ಮೂರು ನಗದು ಬಹುಮಾನಗಳನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News