ಮಂಜೇಶ್ವರದ ಸಮಗ್ರ ಅಭಿವೃದ್ಧಿಗೆ ಯೋಜನೆಗಳ ಜಾರಿಗೆ ಒತ್ತಾಯಿಸಿ ರಾಜ್ಯ ಸರಕಾರಕ್ಕೆ ಮನವಿ

Update: 2019-07-19 18:14 GMT

ಮಂಜೇಶ್ವರ, ಜು.19: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮಾಜಿ ಸಂಸದ ಪಿ.ಕರುಣಾಕರನ್ ಮತ್ತು ಬ್ಲಾಕ್ ಪಂಚಾಯತ್ ಸಮಿತಿಯ ಸದಸ್ಯ ಕೆ.ಆರ್.ಜಯಾನಂದ ಅವರು ಮುಖ್ಯಮಂತ್ರಿ ಸಹಿತ ವಿವಿಧ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಆರೋಗ್ಯ ಸಚಿವೆ ಶ್ರೀಮತಿ ಶೈಲಜಾ ಟೀಚರ್, ಉನ್ನತ ಶಿಕ್ಷಣ ಸಚಿವ ಡಾ.ಕೆ.ಟಿ.ಜಲೀಲ್, ಮೀನುಗಾರಿಕಾ ಸಚಿವೆ ಜೆ.ಮೆರ್ಸಿ ಕುಟ್ಟಿಯಮ್ಮರನ್ನು ಭೇಟಿ ಮಾಡಿ ವಿವಿ ಬೇಡಿಕೆಗಳ ಮನವಿ ಸಲ್ಲಿಸಿದರು.

ಮಂಜೇಶ್ವರ ಬಂದರನ್ನು ಮಿನಿ ಮೀನುಗಾರಿಕಾ ಬಂದರನ್ನಾಗಿ ಮೇಲ್ದರ್ಜೆಗೇರಿಸಬೇಕು, ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುವಿನ ಅಭಿವೃದ್ಧಿಗೆ 1 ಕೋ.ರೂ., ಮುಸೋಡಿ ಸಮುದ್ರ ತೀರವಾಸಿಗಳ ಸಂರಕ್ಷಣೆ, ಮನೆ ಆಸ್ತಿಪಾಸ್ತಿ ಕಳಕೊಂಡವರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು, ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಹೆಚ್ಚುವರಿ ಕೋರ್ಸ್ ಒದಗಿಸಬೇಕು, ಮಂಗಲ್ಪಾಡಿ ತಾಲೂಕು ಆಸ್ಪತ್ರೆಯನ್ನು ಅಭಿವೃದ್ಧಿಗೊಳಿಸಿ ಒಳರೋಗಿಗಳಿಗೆ ದಾಖಲಾತಿ ವ್ಯವಸ್ಥೆ ಕಲ್ಪಿಸಬೇಕು, 20 ಕೋಟಿ ರೂ.ಗಳ ಕಾಮಗಾರಿ ಶೀಘ್ರ ಆರಂಭಿಸಬೇಕು, ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು, ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಉದ್ಘಾಟನೆ, ಪೈವಳಿಕೆ ಮಿನಿ ಕ್ರೀಡಾಂಗಣಕ್ಕೆ 3 ಕೋ.ರೂ., ಐಟಿಐಗೆ 1 ಕೋ.ರೂ., ಮಂಜೇಶ್ವರ ಅತಿಥಿಗೃಹಕ್ಕೆ 1 ಕೋಟಿ ರೂ., ತಾಲೂಕಿಗೆ ಮಿನಿ ಸಿವಿಲ್ ಸ್ಟೇಶನ್ ನಿರ್ಮಾಣಕ್ಕೆ 5 ಕೋ.ರೂ., ತುಳು ಅಕಾಡಮಿಗೆ 1 ಕೋ.ರೂ., ಕುಂಬಳೆ ಐಎಚ್‌ಆರ್‌ಡಿ ಕಾಲೇಜಿಗೆ 3 ಕೋ.ರೂ., ಒದಗಿಸಬೇಕು, ಮಂಜೇಶ್ವರ, ಕುಂಬಳೆ, ಮಂಗಲ್ಪಾಡಿ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು, ಬೇಕೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ಒದಗಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News