ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ;ಪರಿಶೀಲನೆ

Update: 2019-07-19 17:52 GMT

ಬೆಳ್ತಂಗಡಿ: ಮೂಲಭೂತ ಸೌಕರ್ಯ ವಂಚಿತ ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ನಾವೂರು ಗ್ರಾಮದ ಕುದ್ಕೋಳಿ, ಪುಲಿತ್ತಡಿ, ಅಲ್ಯ, ಮಲ್ಲ, ಮುತ್ತಾಜೆ, ಎರ್ಮೆಲೆ, ಮಂಜಲ ಪ್ರದೇಶಗಳಿದ್ದು, ಇಲ್ಲಿ ಸುಮಾರು 25 ಮೂಲನಿವಾಸಿ ಕುಟುಂಬಗಳು ಕಾಡಿನ ನಡುವೆ ವಾಸಿಸುತ್ತಿದೆ. 250 ಕ್ಕೂ ಹೆಚ್ಚು ಜನರಿರುವ ಪ್ರದೇಶವಾಗಿದ್ದರೂ ಮೂಲಭೂತ ಸೌಕರ್ಯಗಳು ವಂಚಿತವಾಗಿದೆ. ವಾರದ ಹಿಂದೆ ಈ ಬಗ್ಗೆ ವಾರ್ತಾಭಾರತಿ ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು. 

ಈ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆ ಮಧ್ಯೆ ಹಳ್ಳ ಒಂದು ಇದ್ದು, ಮಳೆಗಾಲದಲ್ಲಿ ವಾಹನಗಳು ಬರಲು ಅವಕಶಾವಿಲ್ಲದ ಕಾರಣ ಅನಾರೋಗ್ಯಕ್ಕೀಡಾದವರನ್ನು ಎತ್ತಿಕೊಂಡೇ ಹೋಗಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಸೇತುವೆ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಅಧಿಕಾರಿಗಳನ್ನು ಆಗ್ರಹಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಇ. ಜಯರಾಂ, ತಿಂಗಳೊಳಗೆ ಸೇತುವೆ ನಿರ್ಮಾಣ ಕುರಿತು ಅರಣ್ಯ ಇಲಾಖೆ ಸ್ಟಷ್ಟ ಮಾಹಿತಿ ನೀಡಬೇಕು. ತಪ್ಪಿದಲ್ಲಿ ಸೇತುವೆ ನಿರ್ಮಾಣಕ್ಕೆ ತಾ.ಪಂಗೆ ಅನುಮತಿ ನೀಡಬೇಕು ಎಂದು ವನ್ಯಜೀವಿ ವಲಯ ಅರಣ್ಯಾಧಿಕಾರಿ ಕಿರಣ್ ಅವರಿಗೆ ಸೂಚಿಸಿದರು. 

ವಿದ್ಯುತ್ ಸಂಪರ್ಕ ಒದಗಿಸುವ ಬಗ್ಗೆ ಮತ್ತು ರಸ್ತೆ ಅಭಿವೃದ್ಧಿ ಕುರಿತು ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಅನ್‍ಲೈನ್ ಅರ್ಜಿ ಸಲ್ಲಿಸಲಾಗಿದೆ. ಎಂದು ಸ್ಥಳೀಯರು ತಿಳಿಸಿದರು. ಅದರ ಬಗ್ಗೆ ಮುತುವರ್ಜಿ ವಹಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಈ ಕುರಿತು ತಿಂಗಳಿಗೊಮ್ಮೆ ಸಂಬಂಧಪಟ್ಟ ಅಧಿಕಾರಿ ಸಭೆ ಕರೆದು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಇಒ ಜಯರಾಮ್ ಅವರು ನಿವಾಸಿಗಳಿಗೆ ತಿಳಿಸಿದರು. 

ಸಮಾಜ ಕಲ್ಯಾಣಾಧಿಕಾರಿ ಎಚ್.ಎಂ.ಪಾಟೀಲ್, ಉದ್ಯೋಗ ಖಾತರಿ ಯೋಜನೆ ಉಪನಿರ್ದೇಶಕ ಕುಸುಮಾಧರ್, ಇಂಜಿನಿಯರ್ ಉಪವಿಭಾಗದ ಹರೀಶ ಕಾರಿಂಜ, ನಾವೂರು ಗ್ರಾಪಂ ಪಿಡಿಒ ಅಶೋಕ್ ದೇವಾಡಿಗ ಮೊದಲಾದ ಅಧಿಕಾರಿ ವರ್ಗ ಭೇಟಿ ನೀಡಿದ್ದರು. 

ನಾವೂರು ಗ್ರಾಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ಗಣೇಶ್ ಗೌಡ, ಸದಸ್ಯರಾದ ಹರೀಶ್ ಸಾಲಿಯಾನ್, ನಾಗಮ್ಮ, ಅಧಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ ಲಾಯಿಲ, ಕಾರ್ಯದರ್ಶಿ ಜಯಾನಂದ ಪಿಲಿಕಲ, ಸ್ಥಳೀಯರಾದ ಶಿವಪ್ಪ ಮಲೆಕುಡಿಯ, ಸದಾಶಿವ ಮಲೆಕುಡಿಯ, ಕೊರಗ ಮಲೆಕುಡಿಯ, ಜಯಂತ್ ಮತ್ತಿತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News