ಮೈಟ್ ಇಂಜಿನಿಯರಿಂಗ್ ಕಾಲೇಜಿನ ಕಲುಷಿತ ನೀರಿನಿಂದ ಪರಿಸರದ ಬಾವಿಗಳು ಮಲಿನ: ದೂರು

Update: 2019-07-19 18:11 GMT

ಮೂಡುಬಿದಿರೆ: ಮೈಟ್ ಇಂಜಿನಿಯರಿಂಗ್ ಕಾಲೇಜಿನ ಕಲುಷಿತ ನೀರು ಕೆಳಭಾಗಕ್ಕೆ ಹರಿಯುವುದರಿಂದ ಈ ಪರಿಸರದ ಬಾವಿಗಳು ಮಲಿನಗೊಂಡಿದ್ದು ಕುಡಿಯಲು ಅಯೋಗ್ಯವಾಗಿದೆ. ಈ ಬಗ್ಗೆ ಪಂಚಾಯತ್ ಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಮೂಗುಮುಚ್ಚಿ ಸ್ಥಳ ಪರಿಶೀಲನೆ ನಡೆಸುವ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಪಂಚಾಯತ್ ಕುಡಿಯಲು ನೀರಿನ ಸಂಪರ್ಕ ಒದಗಿಸಿದ್ದರೂ ಈಗ ಬಿಲ್ ನೀಡುತ್ತಿದೆ. ಪರಿಸರದಲ್ಲಿ ಗಲೀಜು ಉಂಟಾಗಿರುವುದರಿಮದ ಮನೆಗಳಲ್ಲಿ ರೋಗ ರುಜಿನ ಉಂಟಾಗಿದೆ ಎಂದು ಸ್ಥಳೀಯ ನಿವಾಸಿ ಸೋಮಪ್ಪ ಎಂಬವರು ಬಂಗಬೆಟ್ಟು ಶಾಲೆಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಅಳಲು ತೋಡಿಕೊಂಡರು.

ಮೈಟ್ ಸಂಸ್ಥೆಗೆ ಈ ಕುರಿತು ನೋಟೀಸ್ ನೀಡಿದ್ದೇವೆ, ಪೋಲಿಸರಿಗೂ ದೂರು ನೀಡಿದ್ದೇವೆ ಎಂದು ಪಿಡಿಒ ಉತ್ತರಿಸಿದರು.

ಹಲವು ಕ್ರಿಮಿನಲ್ ಕೇಸುಗಳಲ್ಲಿ ಗುರುತಿಸಿಕೊಂಡಿರುವರವಿ ದೇವಾಡಿಗ, ಸ್ಥಳೀಯರಿಗೆ ಮಾನಸಿಕ ಕಿರುಕುಳ ಉಂಟು ಮಾಡುತ್ತಿರುವುದಲ್ಲದೆ ಬ್ಲಾಕ್ಮೇಲ್ ಕೂಡಾ ಮಾಡಿ ಪರಿಸರದಲ್ಲಿ ನಿರಂತರ ಅಶಾಂತಿ ಉಂಟು ಮಾಡುತ್ತಿದ್ದು, ಅವರನ್ನು ಮತ್ತು ಅವರ ಕುಟುಂಬವನ್ನು ಗಡಿಪಾರು ಮಾಡಬೇಕೆಂದು ತೆಂಕಮಿಜಾರು ಗ್ರಾ.ಪಂ ವ್ಯಾಪ್ತಿಯ ಕೊಪ್ಪದ ಕುಮೇರು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬಂಗಬೆಟ್ಟು ಶಾಲೆಯಲ್ಲಿ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಜನರು ಚರ್ಚೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ತೆಂಕಮಿಜಾರು ಗ್ರಾಮದ ಕೊಪ್ಪದಕುಮೇರು ಎಂಬಲ್ಲಿ ನೆಲೆಸಿರುವ ಕ್ರಿಮಿನಲ್ ಹಿನ್ನೆಲೆಯ ರವಿ ದೇವಾಡಿಗ ವಿರುದ್ಧ ಬೆಳ್ತಂಗಡಿ, ಮೂಡುಬಿದಿರೆ ಸಹಿತ ಹಲವು ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಪರಿಸರದಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಾದರೆ ಆ ಕುಟುಂಬವನ್ನು ಅಲ್ಲಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಪಂಚಾಯತ್ ಗೆ ಗಡಿಪಾರು ಮಾಡಲು ಅಧಿಕಾರವಿಲ್ಲ. ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದೆಂದು ಪಿಡಿಒ ಭಾಗ್ಯಲಕ್ಷ್ಮೀ ಉತ್ತರಿಸಿದರು.  

ಗುಂಡೀರು ಅಂಗನವಾಡಿ ಬಳಿ ಹಳೆಯ ಓವರ್ಹೆಡ್ ಟ್ಯಾಂಕ್ ಅಪಾಯಕಾರಿ ಸ್ಥಿತಿಯಲ್ಲಿದೆ. ಟ್ಯಾಂಕ್ನ ಮೇಲಿಂದ ಸಿಮೆಂಟ್ ತುಂಡುಗಳು ಬೀಳುತ್ತಿದ್ದು ಮಕ್ಕಳು ಅಲ್ಲಿಯೇ ಓಡಾಡುತ್ತಿದ್ದಾರೆ ಅಂಗನವಾಡಿಯನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಸ್ಥಳೀಯ ನಿವಾಸಿ ರಾಮಕೃಷ್ಣ ಎಂಬವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದು ಅದನ್ನು ಅಲ್ಲಿಂದ ಸ್ಥಳಾಂತರಿಸುವ ಭರವಸೆ ನೀಡಿದ್ದಾರೆ ಎಂದು ಪಿಡಿಒ ಉತ್ತರಿಸಿದರು. ಟ್ಯಾಂಕ್ ಅನ್ನು ಎರಡು ತಿಂಗಳೊಳಗೆ ದುರಸ್ಥಿಪಡಿಸುವುದಾಗಿ ಜಿ.ಪಂ ಇಂಜಿನಿಯರ್ ಉತ್ತರಿಸಿದರು.

ಕೊಂಡೆಬೆಟ್ಟು-ಮರಕಡ ಪರಿಸರದಲ್ಲಿ ನೀರಿನ ಸಮಸ್ಯೆಯಿದ್ದು ಇಲ್ಲಿಗೆ ಕುಡಿಯುವ ನೀರು ಒದಗಿಸಲು ಓವರ್ಹೆಡ್ ಟ್ಯಾಂಕ್ ನಿರ್ಮಿಸಬೇಕು ಎಂದು ಆ ಭಾಗದ ನಿವಾಸಿಗಳು ಬೇಡಿಕೆ ಸಲ್ಲಿಸಿದರು. ಆ ಪರಿಸರದಲ್ಲಿ ಓವರ್ಹೆಡ್ ಟ್ಯಾಂಕ್ ನಿರ್ಮಿಸಲು ಗುರುತಿಸಿದ ಸ್ಥಳವು ಖಾಸಗಿಯವರದ್ದಾಗಿದೆ. ಅವರ ಆಕ್ಷೇಪವಿರುವುದರಿಂದ ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಸ್ಥಳವನ್ನು ಗುರುತಿಸಿ ಅಲ್ಲಿ ಓವರ್ಹೆಡ್ ಟ್ಯಾಂಕ್ ನಿರ್ಮಿಸಲಾಗುವುದು. ಪಂಚಾಯತ್ ಜನರ ಬೇಡಿಕೆಗಳ ಕುರಿತಂತೆ ಸಮಗ್ರ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಅನುದಾನ ಬಂದಾಗ ಆದ್ಯತೆಯ ನೆಲೆಯಲ್ಲಿ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಜಿ.ಪಂ ಸದಸ್ಯ ಸುಚರಿತ ಶೆಟ್ಟಿ ಪಂಚಾಯತ್ ಗೆ ಸೂಚಿಸಿದರು.

ಅಶ್ವತ್ಥಪುರ ಗ್ರಾಮದ ಕೊಂಡೆಬೆಟ್ಟು ಜನವಸತಿ ಪ್ರದೇಶದಲ್ಲಿ ಕೆಂಪುಕಲ್ಲು ಕೋರೆ ಇರುವುದರಿಂದ ಪರಿಸರದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಧೂಳು, ಕರ್ಕಶ ಶಬ್ದದಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಕೆಂಪುಕಲ್ಲು ಕೋರೆಗಳಿಗೆ ಪರವಾನಿಗೆ ನೀಡಬಾರದು ಎಂದು ಗ್ರಾಮಸ್ಥರು ಕೋರಿದರು. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಪಿಡಿಒ ಉತ್ತರಿಸಿದರು.

ಬಂಗ್ಲೆ ಶಾಲೆ ಬಳಿ ವಿದ್ಯುತ್ ಕಂಬ ವಾಲಿದ್ದು ಅದನ್ನು ಸರಿಪಡಿಸಬೇಕು. ಕಂಬಗಳ ನಡುವೆ ಅಂತರ ಹೆಚ್ಚಿದ್ದು ವಯರ್ಗಳು ಜೋತಾಡುತ್ತಿದ್ದು ಹೆಚ್ಚುವರಿ ಕಂಬಗಳನ್ನು ಅಳವಡಿಸಬೇಕು. ಕೊಂಡೆಬೆಟ್ಟು ಪರಿಸರದಲ್ಲಿರುವ ವಿದ್ಯುತ್ ಲೈನ್ ಗಳು 50 ವರ್ಷಗಳಷ್ಟು ಹಳೆಯದಾಗಿದ್ದು ಆಗಾಗ ಲೈನ್ ಕಟ್ ಆಗುತ್ತಿದೆ. ಇದನ್ನು ಬದಲಿಸಬೇಕು. ಹೊಸ ಲೈನ್ ಅಳವಡಿಸಬೇಕು. ಅಶ್ವತ್ಥಪುರ ಪಾದೆ ರಸ್ತೆಯಲ್ಲಿ ನಿರುಪಯುಕ್ತ ಟ್ರಾನ್ಸ್ಫಾರ್ಮರ್ ಇದ್ದು ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು. 

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದರು. ತಾ.ಪಂ ಸದಸ್ಯ ಪ್ರಕಾಶ್ ಗೌಡ, ಪಂಚಾಯತ್ ಉಪಾಧ್ಯಕ್ಷೆ ಯಶೋಧ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News