ನಮ್ಮನ್ನು ವಶಕ್ಕೆ ಪಡೆದಿದ್ದಾರೆ: ವಾರಣಾಸಿ ವಿಮಾನ ನಿಲ್ದಾಣದಿಂದ ಡೆರೆಕ್ ಒ'ಬ್ರಿಯಾನ್ ವಿಡಿಯೋ ಸಂದೇಶ

Update: 2019-07-20 08:03 GMT

ವಾರಣಾಸಿ, ಜು.20: ಹತ್ತು ಮಂದಿಯನ್ನು ಬಲಿ ಪಡೆದ ಸೋನಭದ್ರ ಎಂಬಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗುವ ಉದ್ದೇಶದಿಂದ ಉತ್ತರ ಪ್ರದೇಶಕ್ಕೆ ಆಗಮಿಸಿರುವ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ'ಬ್ರಿಯಾನ್ ಅವರ ನೇತೃತ್ವದ ತಂಡವನ್ನು ವಾರಣಾಸಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.

ತಮ್ಮನ್ನು ಹಾಗೂ ತಮ್ಮ ಪಕ್ಷದ ಇಬ್ಬರು ಸಹೋದ್ಯೋಗಿಗಳಾದ ಸುನಿಲ್ ಮೊಂಡಾಲ್ ಹಾಗೂ ಅಭೀರ್ ರಂಜನ್ ಬಿಸ್ವಾಸ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ ಎಂದು ಡೆರೆಕ್ ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. “ನಾವು ಕೇವಲ ಮೂವರಿರುವುದರಿಂದ ಸೆಕ್ಷನ್ 144 ಅನ್ವಯ ನಮ್ಮನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದೆವು. ಮೊದಲು ಬಿಎಚ್‍ಯು ಟ್ರಾಮಾ ಸೆಂಟರ್ ಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ನಂತರ ಸೋನಭದ್ರಕ್ಕೆ ತೆರಳುವುದು ನಮ್ಮ ಉದ್ದೇಶ'' ಎಂದು ಅವರು ವೀಡಿಯೋದಲ್ಲಿ ತಿಳಿಸಿದ್ದಾರೆ.

“ಮೇಲಿನಿಂದ ಸೂಚಿಸಲಾದಂತೆ ತಾವು  ಮಾಡುತ್ತಿದ್ದೇವೆ'' ಎಂದು ತಮ್ಮನ್ನು ತಡೆದಾಗ ಪೊಲೀಸ್ ಅಧಿಕಾರಿಗಳು  ಹೇಳಿದರೆಂದು ಡೆರೆಕ್ ತಿಳಿಸಿದ್ದಾರೆ. ``ನಮ್ಮನ್ನು ಹವಾನಿಯಂತ್ರಿತ ಗೆಸ್ಟ್ ಹೌಸ್ ಗೆ ಕರೆದೊಯ್ಯಲಾಗುವುದೆಂದು  ತಿಳಿಸಲಾಯಿತು. ಆದರೆ ನಮಗೆ ಯಾವುದೇ ಗೆಸ್ಟ್ ಹೌಸ್ ಗೆ ಹೋಗಲು ಇಚ್ಛೆಯಿಲ್ಲ ನಮಗೆ ಸಂತ್ರಸ್ತರನ್ನು ಭೇಟಿಯಾಗಬೇಕು'' ಎಂದು ಅವರು ಹೇಳಿದ್ದಾರೆ.

ಸೋನಭದ್ರಕ್ಕೆ ತೆರಳಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ತಡೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News