×
Ad

ಉಡುಪಿ ಮಹಿಳಾ ಕಾಂಗ್ರೆಸ್‌ನಿಂದ ಆಟಿಡೊಂಜಿ ದಿನ

Update: 2019-07-21 19:55 IST

ಉಡುಪಿ, ಜು.21: ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹಾಗೂ ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ವನ್ನು ರವಿವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಮಳೆಗಾಲದ ಭತ್ತದ ಕೃಷಿ ನಾಟಿ ಮಾಡಿದ ನಂತರ ಸುರಿಯುವ ಭಾರೀ ಮಳೆಯ ಸಂದರ್ಭ ನಮ್ಮ ಪೂರ್ವಿಕರು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪರಿಸರದಲ್ಲಿ ಸಿಗುವ ಔಷಧಿ ಸಸ್ಯಗಳನ್ನು ಬಳಸಿಕೊಂಡು ವಿವಿಧ ಖಾದ್ಯ ಮಾಡಿ ಸೇವಿಸುತ್ತಿದ್ದರು. ಇದರಿಂದ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿತ್ತು ನಶಿಸಿ ಹೋಗುತ್ತಿರುವ ತುಳುನಾಡಿನ ಸಂಸ್ಕೃತಿ ಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.

ಕಾಂಗ್ರೆಸ್ ನಾಯಕರು ಪಕ್ಷದ ಸಿದ್ಧಾಂತ ಬದಿಗಿಟ್ಟು ರಾಜಕೀಯ ಮಾಡುತ್ತಿರುವುದರಿಂದ ಇಂದು ನಾವು ರಾಜಕೀಯ ಡೊಂಬರಾಟ ನೋಡುವ ಸ್ಥಿತಿ ಬಂದೊದಗಿದೆ. ಆತ್ಮಸ್ಥೈರ್ಯದಿಂದ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯ ಮಾಡಬೇಕಾಗಿದೆ. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಪಾತ್ರ ಮಹತ್ವದಾಗಿದೆ ಎಂದು ಅವರು ಹೇಳಿದರು.

ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಸರಳಾ ಕಾಂಚನ್ ಮಾತನಾಡಿ, ಹಿಂದಿನವರು ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಆಹಾರಗಳು ಔಷಧಿಯ ಗುಣ ಗಳನ್ನು ಹೊಂದಿದ್ದವು. ಆದರೆ ಇಂದು ನಮ್ಮ ಮಕ್ಕಳು ಫಾಸ್ಟ್‌ಪುಡ್‌ಗಳನ್ನು ತಿನ್ನುತ್ತ ಆಟಿ ಆಹಾರವನ್ನು ಮರೆತು ಬಿಡುತ್ತಿದ್ದಾರೆ. ಆದುದರಿಂದ ಆಟಿಯ ಆಹಾರ ಗಳ ಮಹತ್ವವನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡಬೇಕಾಗಿದೆ. ಕಾಲ ಬದಲಾವಣೆ ಆಗುತ್ತಿರುವುದರಿಂದ ಇಂದು ಮಳೆ ಕಡಿಮೆ ಆಗುತ್ತಿದೆ. ಇದರ ಪರಿಣಾಮವನ್ನು ಕೃಷಿ ಕ್ಷೇತ್ರ ಎದುರಿಸುತ್ತಿದೆ ಎಂದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಧ್ಯಕ್ಷೆ ಗೀತಾ ವಾಗ್ಲೆ ಆಟಿ ತಿಂಗಳ ಮಹತ್ವ ವನ್ನು ತಿಳಿಸಿದರು. ಕೆಪಿಸಿಸಿ ಕಾರ್ಯದರ್ಶಿ ವರೋನಿಕಾ ಕರ್ನೆಲಿಯೊ, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಸರಸು ಡಿ.ಬಂಗೇರ, ಗೋಪಿ ಕೆ.ನಾಯ್ಕ್, ಚಂದ್ರಿಕಾ ಕೇಲ್ಕರ್, ಸಂಧ್ಯಾ ಶೆಟ್ಟಿ ಹಿರಿಯಡಕ, ಪ್ರಭಾ ಶೆಟ್ಟಿ ಕಾಪು, ಪ್ರಫುಲ್ಲ, ರೋಶನಿ ಒಲಿವೆರಾ, ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು, ಮೊದಲಾದವರು ಉಪಸ್ಥಿತರಿದ್ದರು

ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ಸ್ವಾಗತಿಸಿದರು, ಜ್ಯೋತಿ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮತಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಆಂಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಿಡಿ ಉಪ್ಪಿನಕಾಯಿ, ಅಂಬಡೆ ಉಪ್ಪಿನ ಕಾಯಿ, ಮಾನವಿನ ಕಾಯಿ ಚಟ್ನಿ, ತಿಮರೆ ಚಟ್ನಿ, ನುಗ್ಗೆ ಸೊಪ್ಪು ಬೋಳೆ ಪಲ್ಯ, ನುಗ್ಗೆ ಸೊಪ್ಪು ಪಲ್ಯ, ಕುಕ್ಕುದ ಗೊಜ್ಜು, ತೇವು ತೇಟ್ಲದ ಪಲ್ಯ, ಸೌತೆ ಮತ್ತು ಹೆಸರು ಕಾಳು ಗಸಿ, ನುಗ್ಗೆ ಸೊಪ್ಪು ವಡೆ, ಪತ್ರೊಡೆ, ಹಲಸಿನ ಹಣ್ಣಿನ ಮುಳ್ಕ, ಹಲಸಿನ ಹಣ್ಣಿನ ಗಟ್ಟಿ, ಅತ್ರಾಸ, ಉಪ್ಪಡ್ ಪಚ್ಚಿರೆ, ಗೆಂಡದಡ್ಡೆ, ಮೆಂತೆ ಗಂಜಿ, ಕುಡುತ ಲಡ್ಡು ಸೇರಿದಂತೆ ವಿವಿಧ ಖಾದ್ಯಗಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News