ದೇಹದ ಜೊತೆ ದೇಶ, ದೇವರನ್ನು ಪ್ರೀತಿಸಿ: ಪೇಜಾವರ ಸ್ವಾಮೀಜಿ

Update: 2019-07-21 14:27 GMT

ಉಡುಪಿ, ಜು.21: ದೇವರು ಹಾಗೂ ದೇಶವನ್ನು ಯಾರು ಕೂಡ ಎಂದಿಗೂ ಮರೆಯಬಾರದು. ದೇಹದ ಪ್ರೀತಿ ಜೊತೆಗೆ ದೇಶ ಮತ್ತು ದೇವರ ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಭುವನೇಂದ್ರ ಕಿದಿಯೂರು ಅಭಿನಂದನಾ ಸಮಿತಿಯ ವತಿಯಿಂದ ರವಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಲಾದ ಭುವನೇಂದ್ರ ಕಿದಿಯೂರು ಅವರ 75ನೆ ಸಂವತ್ಸರದ ರತ್ನೋತ್ಸವ-ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇವರಿಗೆ ಅಂಟಿಕೊಂಡವರಿಗೆ ಭಯವಿಲ್ಲ. ದೇವರಿಂದ ದೂರದವರಿಗೆ ಮಾತ್ರ ಭಯ ಕಾಡುತ್ತದೆ. ನಮಗೆ ಸಮಾಜದಿಂದ ಸಿಕ್ಕ ಸಂಪತ್ತನ್ನು ಭಗವಂತ ಹಾಗೂ ಸಮಾಜಕ್ಕೆ ವಿನಿಯೋಗಿಸಬೇಕು. ಇದರಿಂದ ಮನುಷ್ಯನ ಬದುಕಿಗೆ ಒಂದು ಸರಿಯಾದ ಅರ್ಥ ಸಿಗುತ್ತದೆ. ದೇವರ ಅನುಗ್ರಹ ಮತ್ತು ಸಮಾಜದ ಸಹಕಾರವಿಲ್ಲದೆ ಯಾವ ವ್ಯಕ್ತಿಯೂ ಉತ್ತುಂಗ ಶಿಖರಕ್ಕೆ ಏರಲು ಸಾಧ್ಯವಿಲ್ಲ ಎಂದರು.

ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ಪ್ರತಿಯೊಂದು ನಡೆಯೂ ಪರರಿಗೋಸ್ಕರ ಇರಬೇಕು. ಸಮಾಜದಿಂದ ನಾವು ಎಲ್ಲವನ್ನೂ ಪಡೆಯುತ್ತೇವೆ. ನಾವು ಬಳಸುವ ಪ್ರತಿ ಯೊಂದು ವಸ್ತು ಕೂಡ ಸಮಾಜದಿಂದ ಕೊಡುಗೆ ಬಂದಿರುವುದು. ಸಮಾಜ ದಿಂದ ಸ್ವೀಕಾರ ಮಾಡಿರುವ ನಾವು ಸಮಾಜಕ್ಕೆ ನೀಡಿದಾಗ ನಮ್ಮ ಜೀವನ ಸಾರ್ಥಕ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭುವನೇಂದ್ರ ಕಿದಿಯೂರು ಹಾಗೂ ಹೀರಾ ಬಿ.ಕಿದಿ ಯೂರು ದಂಪತಿಯನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಹಿಸಿದ್ದರು. ಉಡುಪಿ ಶೋಕಾ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ರೆ.ಫಾ. ವಲೇರಿಯನ್ ಮೆಂಡೊನ್ಸ ಶುಭಾಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೋಟ ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ.ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಸತೀಶ್ ಯು.ಪೈ, ಸಂಧ್ಯಾ ಪೈ ಉಪಸ್ಥಿತರಿದ್ದರು.

ಜ್ಯೋತಿಷ್ಯ ಕಬಿಯಾಡಿ ಜಯರಾಮ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ಸಮಿತಿಯ ಅಧ್ಯಕ್ಷ ಜಿ.ಶಂಕರ್ ಸ್ವಾಗತಿಸಿದರು. ಹರಿಯಪ್ಪ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಗಣೇಶ್ ರಾವ್ ವಂದಿಸಿ ದರು. ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News