×
Ad

ಗುರುಗಳು ದೇವರಿಗಾಗಿ ಲಂಚ ಪಡೆಯುವ ಏಜೆಂಟರು: ಪ್ರೊ.ಶ್ರೀಪತಿ ತಂತ್ರಿ

Update: 2019-07-21 20:51 IST

ಉಡುಪಿ, ಜು.21: ದೇವರು ಮತ್ತು ನಮ್ಮ ನಡುವೆ ನಿಂತಿರುವ ಗುರುಗಳು ನಮ್ಮನ್ನು ನೇರವಾಗಿ ದೇವರ ಹತ್ತಿರ ಹೋಗಲು ಬಿಡುತ್ತಿಲ್ಲ. ನಮ್ಮ ಮತ್ತು ದೇವರ ನಡುವೆ ಏಜೆಂಟಾಗಿರುವ ಅವರಿಗೆ ಲಂಚ ನೀಡಿಯೇ ದೇವರ ಹತ್ತಿರ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ವಿದ್ವಾಂಸ ಪ್ರೊ.ಪಾದೂರು ಶ್ರೀಪತಿ ತಂತ್ರಿ ಹೇಳಿದ್ದಾರೆ.

ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ ಇಂಡೋರ್ ಆಡಿಟೋರಿಯಂ ನಲ್ಲಿ ರವಿವಾರ ಆಯೋಜಿಸಲಾದ ತನ್ನ 80ರ ಸಂಭ್ರಮ ಮತ್ತು ಆಪ್ತರ ಸಮಾವೇಶದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ನಾನು ಮತ್ತು ನನ್ನ ದೇವರ ಮಧ್ಯೆ ಯಾರು ಇರಬಹುದು. ಆಗ ಆ ದೇವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಅದುವೇ ನಿಜವಾದ ನನ್ನ ದೇವರ ಪೂಜೆ. ಆ ನಂತರ ನಾನು ಯಾರು ಎಂಬುದರ ಬಗ್ಗೆ ಉತ್ತರ ಹುಡುಕಬೇಕಾಗುತ್ತದೆ. ನಾನು ಯಾರು ಹಾಗೂ ಏನು ಎಂಬುದೇ ನನ್ನಲ್ಲಿರುವ ಪ್ರಶ್ನೆ. ಅದಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಆದರೆ ಅದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಆದುದರಿಂದ ನನಗೆ ಯಾವ ಗುರುಗಳ ಅಗತ್ಯವೂ ಇಲ್ಲ ಎಂದರು.

ಶ್ರೀಪತಿ ತಂತ್ರಿ ಹಾಗೂ ರತ್ನ ತಂತ್ರಿ ದಂಪತಿಯನ್ನು ಸನ್ಮಾನಿಸಿದ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಂಪತ್ತು, ಬಂಧುತ್ವ, ವಯಸ್ಸು, ಕಾರ್ಯ ಹಾಗೂ ವಿದ್ಯೆಗೆ ಗೌರವಗಳು ದೊರೆಯುತ್ತವೆ. ಇದರಲ್ಲಿ ವಿದ್ಯೆಗೆ ಅತ್ಯಂತ ಮೇಲಿನ ಸ್ಥಾನ ಇದೆ. ಆದರೆ ಇಂದು ವಿದ್ಯೆ ಕೊನೆಯ ಸ್ಥಾನ ಮತ್ತು ಸಂಪತ್ತು ಮೊದಲ ಸ್ಥಾನಕ್ಕೆ ಬಂದಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

ತನ್ನ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ನಿಜವಾದ ದೇವರ ಪೂಜೆಯಾಗಿದೆ. ಆ ಮೂಲಕ ಶ್ರೀಪತಿ ತಂತ್ರಿ ಪ್ರತಿದಿನ ದೇವರ ಪೂಜೆ ಮಾಡು ತ್ತಿದ್ದಾರೆ. ಎಲ್ಲ ವಿಚಾರಗಳ ಬಗ್ಗೆ ಸಮಗ್ರ ಅಧ್ಯಯನದಲ್ಲಿ ತೊಡಗಿಸಿಕೊಂಡು ಜ್ಞಾನ ಸಂಪಾದಿಸಿರುವ ಇವರು ನಡೆದಾಡುವ ವಿಶ್ವಕೋಶ ಆಗಿದ್ದಾರೆ ಎಂದು ಅವರು ಹೇಳಿದರು.

ಕರ್ನಾಟಕ ಜ್ಞಾನ ಆಯೋಗದ ಮಾಜಿ ಕಾರ್ಯದರ್ಶಿ, ಮಾಜಿ ಕುಲಪತಿ ಹಾಗೂ ಶಿಕ್ಷಣ ತಜ್ಞೆ ಡಾ.ಕೆ.ಸುಧಾ ರಾವ್ ಮಾತನಾಡಿ, ಶ್ರೀಪತಿ ತಂತ್ರಿ ಯವರು ಇತಿಹಾಸದ ಕುರಿತು ಅಧ್ಯಯನ ಮಾಡಿ ಬರೆದಿರುವ ಪುಸ್ತಕಗಳನ್ನು ವಿವಿ ಮಕ್ಕಳಿಗೆ ಪಠ್ಯವಾಗಿ ನೀಡಿದರೆ ಮುಂದೆ ನಡೆಯುವ ಸಂಸ್ಕೃತಿಗಳ ನಡುವಿನ ಸಂಘರ್ಷ ಹಾಗೂ ಜಾತಿ ಜಗಳವನ್ನು ತಡೆಯಬಹುದಾಗಿದೆ. ಆದರೆ ಈಗ ಎಲ್ಲರಲ್ಲೂ ನಾನು ಹೇಳಿದ್ದೆ ಇತಿಹಾಸ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ತಿಳಿಸಿದರು.

ಮಂಗಳೂರು ವಿವಿಯ ಮಾಜಿ ಕುಲಪತಿ ಪ್ರೊ.ಕೆ.ಬೈರಪ್ಪ ಮಾತನಾಡಿ, ತಂತ್ರಿಯವರು ಕೇವಲ ಪ್ರಾಧ್ಯಾಪಕರಾಗಿದರೆ ಇಡೀ ಸಮಾಜಕ್ಕೆ ಸಮಾಜಶಾಸ್ತ್ರ ಮಾರ್ಗದರ್ಶಕರಾಗಿದ್ದಾರೆ. ಇವರ ಪುಸ್ತಕಗಳನ್ನು ಪ್ರಬಂಧವನ್ನು ಡಿಲೀಟ್ ಪದವಿಗಾಗಿ ಮಂಡಿಸಬೇಕು. ಇದು ಸಮಾಜಶಾಸ್ತ್ರ ವಿದ್ಯಾರ್ಥಿಗಳಿಗೆ ಮತ್ತು ಮುಂದಿನ ಪೀಳಿಗೆಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಕಲಬುರ್ಗಿ ಕೇಂದ್ರೀಯ ವಿವಿಯ ಕುಲಾಧಿಪತಿ ಡಾ.ಎನ್. ಆರ್.ಶೆಟ್ಟಿ ವಹಿಸಿದ್ದರು. ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಸ್.ಎಡ ಪಡಿತ್ತಾಯ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ, ಪಾದೂರು ಭಾರ್ಗವ ತಂತ್ರಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ವಾಸುದೇ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News