ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಸಿಎಂ ರಾಜೀನಾಮೆ ನೀಡಲಿ: ಕೋಟ ಶ್ರೀನಿವಾಸ ಪೂಜಾರಿ

Update: 2019-07-21 15:27 GMT

ಉಡುಪಿ, ಜು.21: ರಾಜ್ಯ ಮೈತ್ರಿ ಸರಕಾರ ಬಹುತೇಕ ಬಹುಮತ ಕಳೆದುಕೊಂಡಿದೆ. ಇದು ಸರಕಾರ ನಡೆಸುವವರಿಗೂ ಅರ್ಥವಾಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಮುಖ್ಯಮಂತ್ರಿ ನಾಳೆ ರಾಜೀನಾಮೆ ಕೊಡಬೇಕು. ಒಟ್ಟಾರೆ ವ್ಯವಸ್ಥೆ ದೃಷ್ಟಿಯಿಂದ ವಿದಾಯ ಭಾಷಣ ಮಾಡುವುದು ಉತ್ತಮ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಆದರ್ಶ ರಾಜಕಾರಣ, ರಾಜಧರ್ಮವನ್ನು ನಮಗೆಲ್ಲಾ ಹೇಳಿಕೊಟ್ಟವರು. ನಾಳೆ ಎಲ್ಲವನ್ನೂ ಮುಗಿಸುತ್ತೇನೆ ಎಂದು ಅವರೇ ಭರವಸೆ ನೀಡಿದ್ದಾರೆ. ಹಾಗಾಗಿ ಸ್ಪೀಕರ್ ರಾಜಧರ್ಮವನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಅತೃಪ್ತ ಶಾಸಕರನ್ನು ಸೆಳೆಯುವ ತಂತ್ರಕ್ಕೆ ಮುಖ್ಯಮಂತ್ರಿ ವಿಳಂಬ ನೀತಿ ಮಾಡಲು ಮುಂದಾಗಿದ್ದಾರೆ. ಆದರೆ ಅತೃಪ್ತರು ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಸರಕಾರದ ಒಟ್ಟು ನೀತಿಯನ್ನು ಅವರೆಲ್ಲ ವಿರೋಧಿಸಿದ್ದಾರೆ. ಈ ಸರಕಾರ ಮುಂದುವರಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಅವರೆಲ್ಲ ಅರಿತಿದ್ದಾರೆ. ಜನರ ವಿಶ್ವಾಸ ಕಳೆದುಕೊಳ್ಳುವ ಮೊದಲು ಸರಕಾರದ ವಿಶ್ವಾಸ ಕಳೆದುಕೊಂಡಿದ್ದೇವೆ ಎಂಬುದನ್ನು ಪ್ರಚಾರ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಬಹುಮತ ಕಳೆದುಕೊಂಡ ಸರಕಾರ ರಾಜೀನಾಮೆ ಕೊಡಬೇಕಾಗುತ್ತದೆ. ಆಗ ರಾಜ್ಯಪಾಲರು ಬಹುದೊಡ್ಡ ರಾಜಕೀಯ ಪಕ್ಷವನ್ನು ಕರೆಸಿಕೊಳ್ಳುತ್ತಾರೆ. ಹೀಗೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಎಲ್ಲ ಲಕ್ಷಣ ಕಂಡು ಬರುತ್ತಿದೆ ಎಂದು ಕೋಟ ಹೇಳಿದರು.

'ದೇವರು ಕೂಡ ರಕ್ಷಣೆಗೆ ಬರಲ್ಲ'
ರೇವಣ್ಣ ಮಾಡುವುದೆಲ್ಲ ಮಾಡಿದ್ದಾರೆ. ಇದೀಗ ಸರಕಾರವನ್ನು ದೇವರು ರಕ್ಷಿಸಬೇಕು ಅಂದರೆ ಆಗಲ್ಲ. ದೇವರು ಕೂಡಾ ಅವರ ರಕ್ಷಣೆಗೆ ಬರುವುದಿಲ್ಲ. ಸರಕಾರದಲ್ಲಿ ದೂರುಗಳೆಲ್ಲ ಇರುವುದು ರೇವಣ್ಣ ವಿರುದ್ಧ. ಶಾಸಕರ ಅತೃಪ್ತಿಗೆ, ಸರಕಾರ ಹೋಗುವುದಕ್ಕೆ ರೇವಣ್ಣ ಕಾರಣ. ಸರ್ಕಾರದ ಮುಖ್ಯಸ್ಥರಾಗಿ ಎಲ್ಲಾ ತಪ್ಪುಗಳನ್ನು ರೇವಣ್ಣ ಮಾಡಿದ್ದಾರೆ. ಈಗ ದೇವರ ದರ್ಶನ ಮಾಡಿದರೆ ಪ್ರಯೋಜನವಿಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News