ಪಚ್ಚನಾಡಿ: ವೃದ್ಧ ತಾಯಿಯನ್ನು ಮಧ್ಯರಾತ್ರಿ ಹೊರದಬ್ಬಿದ ಪುತ್ರಿ!

Update: 2019-07-21 16:45 GMT

ಮಂಗಳೂರು, ಜು. 21: ವೃದ್ಧ ತಾಯಿಯನ್ನು ಆಕೆಯ ಪುತ್ರಿ ಮಧ್ಯರಾತ್ರಿ ವೇಳೆಗೆ ಮನೆಯಿಂದ ಹೊರಗೆ ಹಾಕಿದ ಘಟನೆ ನಗರದ ಪಚ್ಚನಾಡಿಯಲ್ಲಿ ನಡೆದಿದ್ದು, ಈ ಪ್ರಕರಣದ ಬಗ್ಗೆ ಹಿರಿಯ ನಾಗರಿಕರ ಸಹಾಯವಾಣಿಯವರು ಪರಿಶೀಲನೆ ನಡೆಸುತ್ತಿದ್ದಾರೆ.

ಪಚ್ಚನಾಡಿಯ ಮನೆಯೊಂದರಲ್ಲಿ ತಾಯಿ ಮತ್ತು ಪುತ್ರಿ ವಾಸವಾಗಿದ್ದು, ಹಲವು ಸಮಯದಿಂದ ಅವರಿಬ್ಬರ ಮಧ್ಯೆ ಜಗಳ ನಡೆಯುತ್ತಿದ್ದು, ಕೆಲವೊಮ್ಮೆ ಪುತ್ರಿ ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ.

ಶುಕ್ರವಾರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ತಡರಾತ್ರಿ 1 ಗಂಟೆ ವೇಳೆಗೆ ಪುತ್ರಿ ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ. ಮಳೆ ಬರುತ್ತಿದ್ದರೂ ಇಡೀ ರಾತ್ರಿಯನ್ನು ತಾಯಿ ಮನೆಯ ಹೊರಗೆ ಕಳೆದಿದ್ದರು. ಶನಿವಾರ ಬೆಳಗ್ಗೆ ಆಸು ಪಾಸಿನ ನಿವಾಸಿಗಳು ಪುತ್ರಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕ ತಾಯಿಯನ್ನು ಮನೆಗೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ಥಳೀಯರು ಮಂಗಳೂರು ಗ್ರಾಮಾಂತರ ಪೊಲೀಸರ ಗಮನಕ್ಕೆ ತಂದು, ಪುತ್ರಿಯ ವಿರುದ್ಧ ಕ್ರಮ ಜರಗಿಸಿ ತಾಯಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದರು.

ಪೊಲೀಸರು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸುವಂತೆ ಹಿರಿಯ ನಾಗರಿಕರ ಸಹಾಯವಾಣಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಅದರಂತೆ ಶನಿವಾರ ಸಂಜೆ ಹಿರಿಯ ನಾಗರಿಕರ ಸಹಾಯವಾಣಿಯ ಸಿಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಇದರ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News