ರಾಜ್ಯದ ಅತಿದೊಡ್ಡ ಗ್ರಾಪಂ ಆಗಿದ್ದ ಸೋಮೇಶ್ವರ ಇನ್ನು ಪುರಸಭೆ

Update: 2019-07-21 17:03 GMT

ಮಂಗಳೂರು, ಜು.21: ರಾಜ್ಯದ ಅತಿದೊಡ್ಡ ಗ್ರಾಪಂ ಆಗಿದ್ದ ಸೋಮೇಶ್ವರವನ್ನು ಪುರಸಭೆಯೆಂದು ಅಧಿಕೃತವಾಗಿ ಘೋಷಿಸಿದ ಸರಕಾರ ಪ್ರಭಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಇದರೊಂದಿಗೆ ವಿಸ್ತೀರ್ಣದಲ್ಲೇ ರಾಜ್ಯದ ಅತಿದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಈ ಹಿಂದೆ ರಾಜ್ಯದ ಅತಿದೊಡ್ಡ ಗ್ರಾಪಂ ಆಗಿದ್ದ ಸೋಮೇಶ್ವರ ಕಳೆದ ಗ್ರಾಪಂ ಚುನಾವಣೆ ಸಂದರ್ಭ ಸದಸ್ಯರ ಸಂಖ್ಯೆ 65ಕ್ಕೇರಿತ್ತು. ಅದಕ್ಕೂ ಮೊದಲು 51 ಮಂದಿಯ ಸದಸ್ಯ ಬಲವಿತ್ತು. ಮಂಗಳೂರಿನಿಂದ 20 ಕಿ.ಮೀ., ದೇರಳಕಟ್ಟೆಯಿಂದ 6 ಕಿ.ಮೀ., ತಲಪಾಡಿಯಿಂದ 5 ಕಿ.ಮೀ. ಅಂತರದಲ್ಲಿ ಸೋಮೇಶ್ವರ ಗ್ರಾಪಂ ಇತ್ತು. ಗ್ರಾಮ ವ್ಯಾಪ್ತಿಯ ಉಚ್ಚಿಲದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನಕ್ಕೆ 500 ವರ್ಷದ ಇತಿಹಾಸ ಹಾಗೂ ಇಲ್ಲಿನ ಮಸೀದಿಗೆ 100 ವರ್ಷದ ಇತಿಹಾಸವಿದೆ.

2,063 ಚ. ವಿಸ್ತೀರ್ಣವಿರುದ ಈ ಗ್ರಾಮದಲ್ಲಿ 7,158 ಸಣ್ಣ-ಪುಟ್ಟ ಕಟ್ಟಡಗಳು, 7 ಸರಕಾರಿ, 5 ಖಾಸಗಿ ಶಾಲೆಗಳು, ಒಂದು ದಫನ ಭೂಮಿ, 3,150 ದಾರಿದೀಪಗಳು, 6 ಕಾಲುಸಂಕ, 13 ಬಸ್ಸು ತಂಗುದಾಣ, 2 ಅಂಚೆ ಕಚೇರಿ, 3 ಆರೋಗ್ಯ ಘಟಕಗಳು, 3 ದೇವಸ್ಥಾನಗಳು, 4 ಮಸೀದಿಗಳು, 2 ನ್ಯಾಯ ಬೆಲೆ ಅಂಗಡಿಗಳು, 7 ಪಂಚಾಯತ್ ಅಂಗಡಿ ಕಟ್ಟಡಗಳು, 10 ಯುವಕ ಸಂಘಗಳು, 7 ಸರಕಾರಿ ತೆರೆದ ಬಾವಿಗಳು, 27 ಕೊಳವೆ ಬಾವಿಗಳು, 21 ಕಿರು ನೀರಾವರಿ ಯೋಜನೆಗಳು, 14 ಅಂಗನವಾಡಿ ಕೇಂದ್ರಗಳಲ್ಲದೆ ವಾಣಿಜ್ಯ, ಸೇವಾ ಸಹಕಾರಿ ಬ್ಯಾಂಕ್‌ಗಳು ಇವೆ.

ರಾಜ್ಯದ ಅತಿದೊಡ್ಡ ಗ್ರಾಪಂನ್ನು ಮೇಲ್ದರ್ಜೆಗೇರಿಸಬೇಕು ಎಂದು ಗ್ರಾಮಸ್ಥರು ಅನೇಕ ವರ್ಷದಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರು. ಚುನಾವಣೆಯನ್ನೂ ಬಹಿಷ್ಕರಿಸಿದ್ದರು. ವರ್ಷದ ಹಿಂದೆಯೇ ಸರಕಾರದಿಂದ ಮನ್ನಣೆ ಸಿಕ್ಕಿತ್ತು. ಆದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಸೋಮೇಶ್ವರಕ್ಕಿಂತ ಮೊದಲೇ ಸಮೀಪದ ಕೋಟೆಕಾರ್ ಗ್ರಾಮವು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿತ್ತು. ಇದು ಸೋಮೇಶ್ವರ ಗ್ರಾಮಸ್ಥರ ಅಸಮಾಧಾನಕ್ಕೂ ಕಾರಣವಾಗಿತ್ತು.

ಸೋಮೇಶ್ವರ ಗ್ರಾಪಂನ ಆಡಳಿತಾವಧಿ ಮುಗಿಯಲು ಐದು ತಿಂಗಳು ಮಾತ್ರ ಬಾಕಿಯುಳಿದಿದೆ. ಈಗಾಗಲೇ ಗ್ರಾಪಂ ಪುರಸಭೆಯಾಗಿ ಮೇಲ್ದರ್ಜೆಗೇರಿರುವ ಬಗ್ಗೆ ಅಧಿಕೃತ ಪತ್ರ ಗ್ರಾಪಂಗೆ ಬಂದಿದ್ದು, ಆಡಳಿತಾಧಿಕಾರಿಯಾಗಿ ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ವಿ.ಆಳ್ವ ಅವರನ್ನು ನೇಮಿಸಲಾಗಿದೆ. ಗ್ರಾಪಂ ಆಡಳಿತಾವಧಿ ಮುಗಿಯುವವರೆಗೆ ಸದಸ್ಯರು ಮುನ್ಸಿಪಲ್ ಕೌನ್ಸಿಲರ್‌ಗಳಾಗಿ ಮುಂದುವರಿಯಲಿದ್ದಾರೆ.

ಇದುವರೆಗೆ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮೇಶ್ವರ ಗ್ರಾಪಂ ಬಿಜೆಪಿ ಪಾಲಿಗೆ ಅತಿದೊಡ್ಡ ಶಕ್ತಿಯಾಗಿತ್ತು. ಇಲ್ಲಿ ಹಿಂದಿನಿಂದಲೂ ಆಡಳಿತ ಬಿಜೆಪಿಯ ಕೈಯಲ್ಲೇ ಇದೆ. ತಾಪಂ ಮತ್ತು ಜಿಪಂನಲ್ಲೂ ಬಿಜೆಪಿ ಸದಸ್ಯರಿದ್ದಾರೆ. ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿರುವುದರಿಂದ ಬಿಜೆಪಿ ತಾಪಂ ಮತ್ತು ಜಿಪಂ ಸದಸ್ಯರನ್ನು ಕಳೆದುಕೊಳ್ಳಲಿದೆ. ಇದು ಭವಿಷ್ಯದ ಉಳ್ಳಾಲ (ಮಂಗಳೂರು ಗ್ರಾಮಾಂತರ) ತಾಲೂಕಿನ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News