ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ಯಾತ್ರೆ, ದೆಹಲಿ ಚಲೋ ರಥಯಾತ್ರೆಗೆ ಬಂಟ್ವಾಳದಲ್ಲಿ ಚಾಲನೆ

Update: 2019-07-21 17:53 GMT

ಬಂಟ್ವಾಳ, ಜು. 21: ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ಯಾತ್ರೆ, ದೆಹಲಿ ಚಲೋ ಆಂದೊಲನಕ್ಕೆ ರವಿವಾರ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಲ್ಲಿ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು.

ಇದಕ್ಕಿಂತಲೂ ಮೊದಲು ಪೊಳಲಿಯ ಸರ್ವಮಂಗಳಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ದೇಶ ಒಂದು, ಇಲ್ಲಿಯ ಮಕ್ಕಳು ಒಂದೇ. ಆ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಸಿಗಬೇಕು ಎನ್ನುವುದು ಒಳ್ಳೆಯ ಚಿಂತನೆ ಎಂದ ಅವರು, ಪ್ರಕಾಶ್ ಅಂಚನ್ ಅವರ ಮುತುವರ್ಜಿಯಿಂದ ದಡ್ಡಲಕಾಡು ಸರಕಾರಿ ಶಾಲೆಯ ಪ್ರಗತಿಯನ್ನು ಕೇಳಿದಾಗಲೇ ಮನಸ್ಸಿಗೆ ಸಮಾಧಾನವಾಯಿತು. ಆಯಾ ರಾಜ್ಯದ ಮಾತೃ ಭಾಷೆಯೊಂದಿಗೆ ಇಂಗ್ಲಿಷ್, ಹಿಂದಿ ಭಾಷೆಯನ್ನು ಕೊಟ್ಟರೆ ಯಾವುದೇ ಸಮಸ್ಯೆಯಾಗುವುದಿಲ್ಲ, ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಶಿಕ್ಷಣ ಸಂಸ್ಥೆಯ ಮೂಲಕ ಸಿಗಬೇಕು ಎಂದರು.

ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆ ಎನ್ನುವುದು ಹೊಸ ಪ್ರಪಂಚದ ಅನಾವರಣವಾದಂತೆ, ಭಾರತವನ್ನು ಗುರುವಿನ ಸ್ಥಾನಕ್ಕೆ ಕೊಂಡೊಯ್ಯುವ ಪ್ರಯತ್ನ ನಮ್ಮೆಲ್ಲರಿಂದಲೂ ಆಗಬೇಕು ಎಂದ ಅವರು, ದೇಶಕ್ಕೆ ಇಂತಹ ಪ್ರೇರಣೆ ನೀಡುವ ಕಾರ್ಯಕ್ತಮ ಬಂಟ್ವಾಳದ ಸಣ್ಣ ಗ್ರಾಮದಿಂದ ಸಿಕ್ಕಿರುವುದು ವಿಶೇಷ. ಈ ಯಾತ್ರೆ ಯಶಸ್ವಿಯಾಗಲಿ ಎಂದು ರಥಯಾತ್ರೆಗೆ ಶುಭ ಹಾರೈಸಿದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ, ವಕೀಲ ಮಯೂರ್ ಕೀರ್ತಿ ಮಾತನಾಡಿದರು.

ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಜಿಪಂ ಸದಸ್ಯ ಪ್ರಕಾಶ್, ದ.ಕ. ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ, ತಾಪಂ ಸದಸ್ಯ ಯಶವಂತ ಪೊಳಲಿ, ಮಾಜಿ ಸದಸ್ಯ ವೆಂಕಟೇಶ್ ನಾವಾಡ, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೆರಾ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಕೇಲ್ದೋಡಿ ಕ್ಷೇತ್ರದ  ಕೋಟಿ ಪೂಜಾರಿ, ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಮುಖ್ಯ ಶಿಕ್ಷಕ ಮೌರೀಶ್ ಡಿಸೋಜಾ, ಹಿಂದೂ ಯುವ ಶಕ್ತಿ ಆಲಡ್ಕದ ಅಧ್ಯಕ್ಷ ಸಂತೋಷ್ ಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕರಾದ ಹಿಲ್ಡಾ ಫರ್ನಾಂಡೀಸ್ ಹಾಗೂ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News