ಕೆಥೊಲಿಕ್ ಸಭಾದಿಂದ ಪೈಪ್ ಕಾಂಪೋಸ್ಟ್ ಮಾಹಿತಿ ಕಾರ್ಯಕ್ರಮ

Update: 2019-07-21 18:04 GMT

ಉಳ್ಳಾಲ: ಹಿಂದೆ ನನ್ನ ಮನೆ, ನನ್ನ ಪರಿಸರ ಎನ್ನುವ ಭಾವನೆ ಜನರಲ್ಲಿತ್ತು, ಆದರೆ ಇಂದು ಅಂತಹ ಭಾವನೆ ದೂರವಾಗಿದ್ದು ಇದರಿಂದಾಗಿ ಪರಿಸರ ತ್ಯಾಜ್ಯದಿಂದ ಹಾಳಾಗುತ್ತಿದೆ ಎಂದು ಕೋಟೆಕಾರ್ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ವಿಕ್ರಂ ಅಭಿಪ್ರಾಯಪಟ್ಟರು.

ಕೆಥೊಲಿಕ್ ಸಭಾ ಪಾನೀರ್ ಘಟಕದ 30ನೇ ವರ್ಷಾಚರಣೆಯ ಪ್ರಯುಕ್ತ 30 ಕಾರ್ಯಕ್ರಮದಲ್ಲಿ ಒಂದಾಗಿರುವ ಭಾನುವಾರ ಪಾನೀರ್ ಚರ್ಚ್ ಸಭಾಂಗಣದಲ್ಲಿ ನಡೆದ ಪೈಪ್ ಕಾಂಪೋಸ್ಟ್ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಮನೆಯಲ್ಲಿ ಹಸಿ, ಒಣ ಮತ್ತು ಅಪಾಯಕಾರಿ ಕಸ ವಿಂಗಡಿಸಿದಾಗ ಹಸಿ ವಿಂಗಡಿಸುವುದು ಮೊದಲು ಕಲಿಯಬೇಕಿದೆ. ಕೋಟೆಕಾರ್ ನಲ್ಲಿ ಕಸ ಹಾಕಲು ಜಾಗ ಇಲ್ಲದ ಕಾರಣ ಮಂಗಳೂರಿಗೆ ಸಾಗಿಸಲಾಗುತ್ತಿದೆ. ಮನೆಯಲ್ಲೇ ಕಸ ವಿಂಗಡಿಸಿ ನೀಡದಿದ್ದರೆ ವಿಲೇವಾರಿ ಮಾಡುವವರು ಸ್ವೀಕರಿಸದ ಕಾರಣ ಸಮಸ್ಯೆ ಎದುರಾಗುತ್ತದೆ ಎಂದು ತಿಳಿಸಿದರು.

ಪಾನೀರ್ ಮರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್ ಅಧ್ಯಕ್ಷತೆ ವಹಿಸಿ, ನಮ್ಮ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆಬದಿ ಬಿಸಾಡಿ ಪರಿಸರದಲ್ಲಿ ಎಸೆಯುವುದು ಖೇದಕರ. ಮನೆಯ ತ್ಯಾಜ್ಯದಿಂದ ಸಿಗುವ ಉಪಯೋಗದ ಬಗ್ಗೆ ಮಾಹಿತಿ ಪಡೆದು ಪಾಲಿಸಬೇಕು. ನಮ್ಮ ಮನೆಯಿಂದ ಊರು, ಗ್ರಾಮ ಸ್ವಚ್ಛವಾಗಬೇಕು ಎಂದು ಹೇಳಿದರು.

ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಲ್ಯಾನ್ಸಿ ಡಿಸೋಜ, ಪಾನೀರ್ ಇಗರ್ಜಿಯ ಪಾಲನಾ ಮಂಡಳಿ ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೊನ್ಸಾಲ್ವಿಸ್, ಕೆಥೊಲಿಕ್ ಸಭಾ ಮಂಗಳೂರು ದಕ್ಷಿಣ ವಲಯ ಕೋಶಾಧಿಕಾರಿ ಸ್ಟೀವನ್ ವಾಸ್,  ನಿಕಟಪೂರ್ವ ಅಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್,  ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರುವಿತಾ ಮಿನೇಜಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News