ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘ ಉದ್ಘಾಟನೆ

Update: 2019-07-21 18:15 GMT

ಮೂಡುಬಿದಿರೆ: ಸಾಹಿತ್ಯದ ಹಿನ್ನಲೆಯನ್ನು ಅರಿತುಕೊಂಡಾಗ ಭಾವಾನಾತ್ಮಕವಾದ ಆನಂದವನ್ನು ಸಂಪಾದಿಸಬಹುದು ಎಂದು ಖ್ಯಾತ ಚಿಂತಕ ಹಾಗೂ ವಾಗ್ಮಿ ಮುನಿರಾಜ್ ರೆಂಜಾಳ ಹೇಳಿದರು. 

ಅವರು ಶುಕ್ರವಾರ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಲ್ಲಿ ಪರಿಪೂರ್ಣತೆಯನ್ನು ಹೊಂದಬೇಕೆಂದರೆ ಕಲೆ, ಸಾಹಿತ್ಯ ಅತಿ ಪ್ರಮುಖವಾಗಿರುತ್ತದೆ. ಸಾಹಿತ್ಯವನ್ನು ರಚಿಸಲು ಅದರದ್ದೇ ಆದ ಕಾರಣ ಹಾಗೂ ಹಿನ್ನಲೆಯನ್ನರಿಯುವುದು ಮುಖ್ಯ.  ಸಾಹಿತ್ಯ ಸಂಘವೆಂಬುದು ನಮ್ಮಲ್ಲಿರುವ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಉತ್ತಮ ವೇದಿಕೆಯಾಗಿದ್ದು,  ಅಲ್ಲದೆ ಜೀವನದಲ್ಲಿ ಏನಾನ್ನಾದರೂ ಸಾಧಿಸಲು ಛಲ ಮೂಡಿಸುತ್ತದೆ. ಸಾಹಿತ್ಯದ ಅಭಿರುಚಿಯನ್ನು ಜಗಕ್ಕೆ ಸಾರುವ ನುಡಿಸಿರಿಯಂತಹ ಕಾರ್ಯಕ್ರಮದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಭಾಗವಹಿಸಿದರೆ ಅದಕ್ಕಿಂತ ದೊಡ್ಡ ಸಾಹಿತ್ಯ ಸಂಘದ ಚಟುವಟಿಕೆ ಬೇರೊಂದಿಲ್ಲ. ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಂಡು ಸಂತೋಷವನ್ನು ಜೀವನದಲ್ಲಿ ನಿರಂತರವಾಗಿ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಆಳ್ವಾಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ಮಾತನಾಡಿ,  ಸಾಹಿತ್ಯವು ಒಂದು ಕಲೆಯಾಗಿದ್ದು ಅದರಿಂದ ಬದುಕನ್ನು ಕಟ್ಟಿಕೊಳ್ಳಬಹುದು. ಸಾಹಿತ್ಯದಲ್ಲಿ  ಆಸಕ್ತಿ ಹೊಂದಿದವರು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಸಕಾರಾತ್ಮಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸರ್ವತೋಮುಖ ಅಭಿವೃಧ್ಧಿಯನ್ನು ಹೊಂದಬೇಕು ಹಾಗೂ ಸಾಹಿತ್ಯ ಸಂಘಗಳಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು.  

ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ  ಅಭಿನಂದನ್ ಶೆಟ್ಟಿ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಶಿವಾನಿ ಸ್ವಾಗತಿಸಿ,ಕೀರ್ತನಾ ನಾಯಕ್ ನಿರೂಪಿಸಿ,ಧಾತ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News