ಕಂಕನಾಡಿ: ಬೃಹತ್ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತ; ಇಬ್ಬರಿಗೆ ಗಾಯ
ಮಂಗಳೂರು, ಜು.22: ಕಂಕನಾಡಿ ಸರ್ಕಲ್ ಬದಿಯಲ್ಲಿದ್ದ ಬೃಹತ್ ಆಲದಮರವೊಂದು ಗಾಳಿ-ಮಳೆಗೆ ಸೋಮವಾರ ಸಂಜೆ ಬುಡಮೇಲಾಗಿದೆ. ಘಟನೆಯಲ್ಲಿ ವಿದ್ಯಾರ್ಥಿನಿ ಸಹಿತ ಇಬ್ಬರು ಗಾಯಗೊಂಡಿದ್ದಾರೆ.
ವೆಲೆನ್ಸಿಯಾ ನಿವಾಸಿ, ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ರಿಯಾ (13) ಹಾಗೂ ಮತ್ತೋರ್ವ ಆ್ಯಕ್ಟೀವಾ ಸವಾರನಿಗೆ ಗಾಯಗಳಾಗಿವೆ.
ಕಂಕನಾಡಿ ಸರ್ಕಲ್ ಸಮೀಪದ ಖಾಸಗಿ ಶಾಲೆಯ ವಿದ್ಯಾರ್ಥಿನಿ ರಿಯಾ ಹಾಗೂ ಐವರು ಸ್ನೇಹಿತೆಯರು ಶಾಲೆ ಬಿಟ್ಟ ಬಳಿಕ ಮನೆ ಕಡೆಗೆ ಹೊರಟಿದ್ದಾರೆ. ಈ ವೇಳೆ ಬೀಸಿದ ಗಾಳಿ-ಮಳೆಯಿಂದಾಗಿ ಬೃಹತ್ ಆಲದಮರ ಧರಾಶಾಹಿಯಾಗಿದೆ. ಮರ ಬೀಳುವ ಶಬ್ದಕ್ಕೆ ವಿದ್ಯಾರ್ಥಿಗಳು ಓಡಿಹೋಗಲೆತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ರಿಯಾಗೆ ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ.
ಫಳ್ನೀರ್ ಕಡೆಯಿಂದ ಕಂಕನಾಡಿಗೆ ತೆರಳುತ್ತಿದ್ದ ಸ್ಕೂಟರ್ ಸವಾರ ಆಲದಮರದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದರು. ಸ್ಥಳೀಯರು ಮರದಡಿಯಿಂದ ಸವಾರ ನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಸವಾರನ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಸಮೀಪದಲ್ಲಿದ್ದ ಆಟೊ ಚಾಲಕರೊಬ್ಬರು ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ದರು ಎಂದು ಪ್ರತ್ಯಕ್ಷದರ್ಶಿ ಯುಸೂಫ್ ಎಂಬವರು ತಿಳಿಸಿದ್ದಾರೆ.
ಮರದಡಿ ಸಿಲುಕಿದ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮತ್ತೊಂದು ಆಟೊ ಸಿಕ್ಕಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಕದ್ರಿ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.