ತುಳು ಸಂಸ್ಕೃತಿಯ ಉತ್ತಮ ಮೌಲ್ಯಗಳನ್ನು ಗ್ರಹಿಸಿ ಬೆಳೆಸಿ: ಹೆಪ್ಸಿಬಾ ರಾಣಿ

Update: 2019-07-22 13:03 GMT

ಉಡುಪಿ, ಜು. 22: ಕಳೆದ 2000 ವರ್ಷಗಳಿಂದ ಬೆಳೆದು ಬಂದಿರುವ ತುಳು ಸಂಸ್ಕೃತಿಯಲ್ಲಿರುವ ಉತ್ತಮ ಮೌಲ್ಯಗಳನ್ನು ಗ್ರಹಿಸಿ ಹಾಗೂ ಒಳ್ಳೆಯ ಚಟು ವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದರಿಂದ ಮಹಿಳೆಯರು ಮತ್ತು ಪುರುಷರು ಸಮಾನ ಹಾಗೂ ಸಂತೋಷವಾಗಿ ಬದುಕು ನಡೆಸಲು ಸಾಧ್ಯ ವಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದ್ದಾರೆ.

ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ, ಬಂಟರ ಸಂಘ ಉಡುಪಿ, ತುಳುಕೂಟ ಉಡುಪಿ ಇವುಗಳ ಸಹಯೋಗ ದೊಂದಿಗೆ ಸೋಮವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ‘ಆಷಾಡದಲ್ಲೊಂದು ದಿನ -ಮಹಿಳೆಯರ ಕೂಟ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ನೈಸರ್ಗಿಕ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ವಿಶಿಷ್ಟತೆಯನ್ನು ಹೊಂದಿದೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಇಲ್ಲಿನ ಮಹಿಳೆಯರು ಮಳೆಗಾಲದಲ್ಲಿ ತಮ್ಮ ತುಳು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಂದುವರೆಸುವ ಜವಾಬ್ದಾರಿ ಸಹ ಮಹಿಳೆಯರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಹುಕಾರ್ಯ(ಮಲ್ಟಿ ಟಾಸ್ಕಿಂಗ್)ಗಳ ಬಗ್ಗೆ ತರಬೇತಿ ನೀಡುವ ಹೊಸ ಡಿಪ್ಲೋಮಾ ಕೋರ್ಸ್‌ಗಳು ಇಂದು ಜಗತ್ತಿನಲ್ಲಿ ಆರಂಭವಾಗಿವೆ. ಆದರೆ ನಮ್ಮ ಪ್ರತಿಯೊಬ್ಬ ಮಹಿಳೆಯರು ಈಗಾಗಲೇ ತಮ್ಮ ಜೀವನದಲ್ಲಿ ಬಹುಕಾಯಕ ಗಳನ್ನು ಮಾಡುತ್ತಿದ್ದಾರೆ. ಮನೆ ಕೆಲಸ, ಸಂಘಸಂಸ್ಥೆಗಳ ಚಟುವಟಿಕೆ, ಕೃಷಿ ಕಾರ್ಯ, ಕಚೇರಿಯಲ್ಲಿ ಕೆಲಸ, ಶಿಕ್ಷಣ ಹೀಗೆ ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಹಿಳೆ ಯಾವುದೇ ಕಾರ್ಯದಲ್ಲಿ ತೊಡಗಿಸಿ ಕೊಂಡರೂ ಅದು ಯಶಸ್ವಿಯಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಂದು ರೂಪೇಶ್ ಮಾತನಾಡಿ, ತುಳು ಸಂಸ್ಕೃತಿಯ ಭಾಗವಾಗಿರುವ ಆಟಿ ತಿಂಗಳ ಆಚರಣೆ ನಮಗೆ ಹೊಸ ಅನುಭವ. ತುಳುನಾಡಿನ ಖಾದ್ಯ ಇಡೀ ಜಗತ್ತಿನಲ್ಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಎಲ್ಲರೂ ಮಾಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್ ವಹಿಸಿದ್ದರು. ಉಡುಪಿ ಬಂಟರ ಸಂಘದ ಸಹ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಮಾತೃ ಸಂಘದ ಕಾರ್ಯದರ್ಶಿ ಮೋಹನ್ ಶೆಟ್ಟಿ ನಿಡಂಬೂರು, ಕೋಶಾಧಿಕಾರಿ ತೋನ್ಸೆ ಮನೋಹರ ಶೆಟ್ಟಿ, ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ರಾಧಾದಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ನಳಪಾಕ ಮಾಡಿ ತಂದ ಮಹಿಳೆಯರನ್ನು ಗೌರವಿಸ ಲಾಯಿತು. ತಾಲೂಕು ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಯಶೋಧಾ ಜೆ.ಶೆಟ್ಟಿ ಸ್ವಾಗತಿಸಿ ದರು. ಪ್ರಸನ್ನ ಪ್ರಸಾ್ ರಾವ್ ಕಾರ್ಯಕ್ರಮ ನಿರೂಪಿಸಿದರು.

ತುಳುನಾಡಿನ ಖಾದ್ಯಗಳ ರುಚಿ ಸವಿದ ಡಿಸಿ, ಸಿಇಒ!

ವಿವಿಧ ಮಹಿಳಾ ಮಂಡಳಿಗಳ ಸದಸ್ಯೆಯರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದ ತಿಮರೆ ಚಟ್ನಿ, ಮಾವಿನ ಹಣ್ಣಿನ ಚಟ್ನಿ, ಉಪ್ಪಡ್ ಪಚ್ಚಿರ್ ಪದಾರ್ಥ, ಪುಂಡಿಗಸಿ, ಕೆಂಡದಡ್ಯೆ, ಸೇಮೆದಡ್ಯೆ, ನುಗ್ಗೆ ವಡೆ, ತೇವು ಚಟ್ನಿ, ಪಾಯಸ, ಹಲಸಿನ ಮುಳ್ಕ, ತೇವು, ತೊಂಜಕ್, ಪದ್ಪೆ ಪಲ್ಯ, ಹಲಸಿನ ಹಣ್ಣಿನ ಗಟ್ಟಿ, ಪತ್ರೋಡೆ, ಮೂಡೆ, ಅನ್ನ, ಹುರುಳಿ ಸಾರು, ಅರಸಿನ ಎಲೆಯ ಗಟ್ಟಿ ಸೇರಿದಂತೆ ವಿವಿಧ ಖಾದ್ಯಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಣ ಬಡಿಸಲಾಯಿತು.

ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂದು ರೂಪೇಶ್ ಇತರ ಮಹಿಳೆಯರೊಂದಿಗೆ ಕೂತು ಸಹಭೋಜನ ನಡೆಸಿ, ತುಳುನಾಡಿನ ವಿವಿಧ ಖಾದ್ಯಗಳ ರುಚಿಯನ್ನು ಸವಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News