ಉಡುಪಿ: ಪರಿಸರ ಜಾಗೃತಿಗಾಗಿ 54 ಚರ್ಚ್‌ಗಳಲ್ಲಿ ಸಾಮೂಹಿಕ ವನಮಹೋತ್ಸವ

Update: 2019-07-22 13:07 GMT

ಉಡುಪಿ, ಜು.22: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವತಿ ಯಿಂದ ಉಡುಪಿ ಧರ್ಮ ಪ್ರಾಂತ್ಯದ 54 ಚರ್ಚ್‌ಗಳಲ್ಲಿ ಏಕಕಾಲದಲ್ಲಿ ಆಚರಿಸಲಾಗುವ ವನಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಶಂಕರಪುರ ಸೈಂಟ್ ಜೋನ್ಸ್ ಚರ್ಚಿನ ಆವರಣದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು.

ವನಮಹೋತ್ಸವಕ್ಕೆ ಚಾಲನೆ ನೀಡಿದ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಮಾತನಾಡಿ, ಪರಿಸರ ಸಂರಕ್ಷಣೆಗೆ ಸಂಘ-ಸಂಸ್ಥೆಗಳು ಪರಸ್ಪರ ಸಂಘಟಿತರಾದರೆ ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಸಾಧ್ಯವಿದೆ. ಧಾರ್ಮಿಕ ಕ್ಷೇತ್ರಗಳ ಪರಿಸರವೂ ಸಹ ಮರ, ಗಿಡಗಳ ಮೂಲಕ ಕಂಗೊಳಿಸುವಂತಾಗಬೇಕು ಎಂದು ಹೇಳಿದರು.

ಪರಿಸರದ ಬಗ್ಗೆ ನಾವು ಪ್ರತಿನಿತ್ಯ ಜಾಗೃತಿ ವಹಿಸುವುದು ಅತಿ ಅವಶ್ಯವಾಗಿದೆ. ಇಲ್ಲವಾದರೆ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ. ನೂರಾರು ಗಿಡಗಳನ್ನು ನೆಟ್ಟು ಬೆಳೆಸುವುದೇ ವನಮಹೋತ್ಸವದ ಮುಖ್ಯ ಉದ್ಧೆಶವಾಗಿದೆ. ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಜಾಗೃತಿ ವಹಿಸಬೇಕು ಎಂದು ಅವರು ತಿಳಿಸಿದರು.

ಮರಗಳ ನಾಶ ಹಾಗೂ ಪ್ಲಾಸ್ಟಿಕ್ ಬಳಕೆ ಜಾಸ್ತಿಯಾಗುತ್ತಿದ್ದು, ಇದರಿಂದ ಪರಿಸರದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಸರದಲ್ಲಿ ಸಮ ತೋಲನ ಕಾಪಾಡಲು ಪ್ರತಿಯೊಬ್ಬರು ಹೆಚ್ಚಿನ ಜಾಗೃತಿ ವಹಿಸಬೇಕಾಗಿದೆ. ಪ್ರತಿ ಯೊಬ್ಬರು ಪರಿಸರದ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೆೀಕಾದ ಅವಶ್ಯಕತೆ ಇದೆ ಎಂದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಸೂಚನೆಯಂತೆ ಉಡುಪಿ ಜಿಲ್ಲೆಯ 54 ಚರ್ಚ್‌ಗಳ ಆವರಣದಲ್ಲಿ ಸುಮಾರು 600ಕ್ಕೂ ಅಧಿಕ ಗಿಡಗಳನ್ನು ನೆಟ್ಟಿರುವುದಲ್ಲದೆ ಸಾರ್ವಜನಿಕರಿಗೆ 10000ಕ್ಕೂ ಹೆಚ್ಚು ಗಿಡಗಳನ್ನು ವಿತರಿಸ ಲಾಯಿತು. ಕಲ್ಯಾಣಪುರ ವಲಯದ 9 ಘಟಕಗಳಿಗೆ 2000, ಶಿರ್ವ ವಲಯದ 7 ಘಟಕಗಳಿಗೆ 1500, ಕುಂದಾಪುರ ವಲಯದ 12 ಘಟಕಗಳಿಗೆ 2000, ಕಾರ್ಕಳ ವಲಯದಲ್ಲಿ 1000, ಉಡುಪಿ ವಲಯದಲ್ಲಿ 1500 ಗಿಡಗಳನ್ನು ವಿತರಿಸಲಾಗಿದೆ.

ಸಾರ್ವಜನಿಕರು ತಮ್ಮ ಮನೆಗಳಿಗೆ ಕೊಂಡು ಹೋದ ಗಿಡವನ್ನು ಪೋಷಣೆ ಮಾಡಿ ಪ್ರತಿ ತಿಂಗಳು ಸಂಬಂಧಿತ ಘಟಕಗಳಿಗೆ ಮಾಹಿತಿ ನೀಡುವ ವಿಶಿಷ್ಠ ಯೋಜನೆಯ ಮೂಲಕ ಪ್ರಾಮಾಣಿಕವಾಗಿ ಗಿಡದ ಪೋಷಣೆ ಮಾಡಲು ಸೂಚನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News