ವರುಣನ ಆರ್ಭಟಕ್ಕೆ ತತ್ತರಿಸಿದ ಕರಾವಳಿ: ಜನಜೀವನ, ವಾಹನಗಳ ಸಂಚಾರ ಅಸ್ತವ್ಯಸ್ತ

Update: 2019-07-22 14:27 GMT

ಮಂಗಳೂರು, ಜು.22: ದ.ಕ. ಜಿಲ್ಲೆಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದೆ. ಸೋಮವಾರ ದಿನವಿಡೀ ಎಡೆಬಿಡದೆ ನಿರಂತರ ಮಳೆ ಸುರಿದ ರಭಸಕ್ಕೆ ಮಂಗಳೂರಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ಗುಡ್ಡ ಕುಸಿತದಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ಕೃತಕ ಪ್ರವಾಹದಿಂದ ಫಳ್ನೀರ್‌ನ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಂಕನಾಡಿ ಸರ್ಕಲ್‌ನಲ್ಲಿದ್ದ ಬೃಹತ್ ಆಲದಮರ ಧರಾಶಾಹಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜಿಲ್ಲೆಯಲ್ಲಿ ಜು.27ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲಾಡಳಿತ ವತಿಯಿಂದ ಸೂಕ್ತ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರವಾಸಿಗರು ಹಾಗೂ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಮನೆಗಳಿಗೆ ಹಾನಿ

ಮಂಗಳೂರು ನಗರದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವೆಡೆ ಕೃತಕ ಪ್ರವಾಹದಿಂದ ನಾಗರಿಕರು ಬವಣೆಪಟ್ಟರು. ಕುಂಜತ್ತಬೈಲ್‌ ನಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಈ ವೇಳೆ ಮನೆ ಮಂದಿ ಮುನ್ನೆಚ್ಚರಿಕೆ ವಹಿಸಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ.

ಆಂಬ್ಲಮೊಗರಿನಲ್ಲಿ ಗುಡ್ಡ ಜರಿತ ಉಂಟಾಗಿ ಗುಡ್ಡದ ಅಡಿಯಲ್ಲಿದ್ದ ಅಬ್ಬಾಸ್ ಮತ್ತು ರಜಾಕ್ ಎಂಬವರಿಗೆ ಸೇರಿದ ಮನೆಗಳು ಅಪಾಯಕ್ಕೆ ಸಿಲುಕಿವೆ. ಇಲ್ಲಿ ಇನ್ನಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಗುಡ್ಡ ಕುಸಿತಕ್ಕೆ ವಿದ್ಯುತ್ ಕಂಬ ವೊಂದು ಧರಾಶಾಹಿಯಾಗಿದ್ದು, ಮನೆಯವರ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ. ಮೆಸ್ಕಾಂ ಸಿಬ್ಬಂದಿ ಕೂಡಲೇ ಸ್ಪಂದಿಸಿ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದಾರೆ.

ಫಳ್ನೀರಲ್ಲಿ ಮನೆಗಳಿಗೆ ನೀರು: ನಗರದ ಫಳ್ನೀರ್‌ನಲ್ಲಿ ರಾಜಕಾಲುವೆ ಉಕ್ಕಿ ಹರಿದು ತಗ್ಗು ಪ್ರದೇಶದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿದೆ. ಅಲ್ಲದೆ, ಅಲ್ಲಿನ ಅಪಾರ್ಟ್‌ಮೆಂಟ್ ಕೂಡ ಜಲಾವೃತವಾಗಿತ್ತು. ಕೆಸರು ನೀರು ಹರಡಿದ್ದರಿಂದ ನಾಗರಿಕರು ಬವಣೆಪಟ್ಟರು.

ಗುಡ್ಡ ಕುಸಿತ

ಬಟ್ಟಗುಡ್ಡೆಯಲ್ಲಿ ಗುಡ್ಡ ಕುಸಿತದಿಂದ ರಾ.ಹೆ. 66ರ ಕದ್ರಿ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಒಂದು ಗಂಟೆ ಕಾಲ ಅಸ್ತವ್ಯಸ್ತಗೊಂಡಿತು. ಬಿಜೈ ಬಟ್ಟಗುಡ್ಡೆಯಿಂದ ನಂತೂರುವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಕದ್ರಿ ಸಂಚಾರ ಪೊಲೀಸರು ಭೇಟಿ ನೀಡಿದರು. ಘಟನೆ ನಡೆದ ಕೆಲ ಹೊತ್ತಿನಲ್ಲೇ ಶೀಘ್ರಗತಿಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ನಗರದ ಪಿವಿಎಸ್ ಬಳಿಯ ಎಂಪೈರ್ ಮಾಲ್ ಹಿಂಭಾಗದ ರಸ್ತೆಯಲ್ಲಿ ನೀರು ಹರಿದು ಸಂಚಾರ ಅಸ್ತವ್ಯಸ್ತವಾಗಿತ್ತು. ಮಲ್ಲಿಕಟ್ಟೆ ಸಿಟಿ ಆಸ್ಪತ್ರೆ, ಅಂಬೇಡ್ಕರ್ ಸರ್ಕಲ್ ಮತ್ತಿತರ ಕಡೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಯಲ್ಲೇ ನೀರು ಹರಿದು ತೊಂದರೆಯಾಯಿತು.

ನಗರದ ವಿವಿಧ ಕಡೆಗಳಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಹಲವೆಡೆ ಅರ್ಧಕ್ಕೆ ಕಾಮಗಾರಿ ನಿಂತಿದ್ದರಿಂದ ಸಂಚಾರ ವ್ಯವಸ್ಥೆಗೂ, ನೀರಿನ ಸರಾಗ ಹರಿಯುವಿಕೆಗೂ ತೊಡಕಾಗಿದೆ.

ಮಳೆ ವಿವರ

ರವಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯಲ್ಲಿ ಸರಾಸರಿ 66.8 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ 66.5 ಮಿ.ಮೀ., ಬೆಳ್ತಂಗಡಿಯಲ್ಲಿ 65.2 ಮಿ.ಮೀ., ಮಂಗಳೂರಿನಲ್ಲಿ 76.1 ಮಿ.ಮೀ., ಪುತ್ತೂರಲ್ಲಿ 75 ಮಿ.ಮೀ., ಸುಳ್ಯದಲ್ಲಿ 51 ಮಿ.ಮೀ. ಮಳೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News