ಬೇರೆಲ್ಲಾ ಆಕರ್ಷಣೆಯನ್ನು ಮೀರಿಸುವ ಶಕ್ತಿ ಯಕ್ಷಗಾನಕ್ಕಿದೆ: ಪಲಿಮಾರುಶ್ರೀ

Update: 2019-07-22 14:46 GMT

ಉಡುಪಿ, ಜು.22: ನವರಸಗಳನ್ನು ಹೊಮ್ಮಿಸುವ ಯಕ್ಷಗಾನಕ್ಕೆ ದೂರದರ್ಶನವೂ ಸೇರಿದಂತೆ ಉಳಿದೆಲ್ಲಾ ಆಕರ್ಷಣೆಗಳನ್ನು ಮೀರಿ ಜನರನ್ನು ತನ್ನತ್ತ ಸೆಳೆಯುವ ಶಕ್ತಿ ಇದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶರ್ತೀರ್ಥರು ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌ಗಳ ಸಹಯೋಗದೊಂದಿಗೆ ಕಿರಿಮಂಜೇಶ್ವರದ ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಒಂದು ವಾರ ಕಾಲ ಆಯೋಜಿಸಿದ ನಾಲ್ಕನೇ ವರ್ಷದ ‘ಯಕ್ಷ ಅಷ್ಟಾಹ’ ಕಾರ್ಯಕ್ರಮದಲ್ಲಿ ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿ ಅವರು ಮಾತನಾಡುತಿದ್ದರು.

ಇದೇ ಸಂದರ್ಭದಲ್ಲಿ ಅವರು ಯಕ್ಷಗಾನ ಕಲಾವಿದರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಾರಾಡಿ ಮನೆತನದ ಕೊಂಡಿಯಾಗಿರುವ ಹಾರಾಡಿ ಸರ್ವೋತ್ತಮ ಗಾಣಿಗರನ್ನು ಸನ್ಮಾನಿಸಿದರು.

ಕರಾವಳಿ ಭಾಗದಲ್ಲಿ ಯಕ್ಷಗಾನ ನೂರಾರು ವರ್ಷಗಳ ಕಾಲ ತನ್ನ ಅಕರ್ಷಣೆ ಯನ್ನು ಉಳಿಸಿಕೊಳ್ಳಲು ನಮ್ಮ ಯಕ್ಷ ಕಲಾವಿದರ ಬದ್ಧತೆಯೇ ಕಾರಣ ಎಂದ ಸ್ವಾಮೀಜಿ, ಸುಬ್ರಹ್ಮಣ್ಯ ಧಾರೇಶ್ವರರಂಥ ಉತ್ತಮ ಕಲಾವಿದರನ್ನು ನಾವು ಸದಾ ಪ್ರೋತ್ಸಾಹಿಸಬೇಕು ಎಂದರು.

ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ, ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ತಲ್ಲೂರು ಶಿವರಾಂ ಶೆಟ್ಟಿ, ಯಕ್ಷಗಾನ ಮೇಳಗಳ ಯಜಮಾನರಾದ ಪಿ.ಕಿಶನ್ ಕುಮಾರ್ ಹೆಗ್ಡೆ, ಯುವ ಉದ್ಯಮಿ ಪ್ರಕಾಶ್ ನಾಯಕ್ ನರಸಿಂಗೆ, ಮಂಗಳೂರು ಕರ್ನಾಟಕ ಯಕ್ಷಧಾಮದ ಎಚ್.ಜನಾರ್ದನ್ ಹಂದೆ ಉಪಸ್ಥಿತರಿದ್ದರು.

ರಾಘವೇಂದ್ರ ಉಡುಪ ಕಾರ್ಯಕ್ರಮವನ್ನು ನಿರೂಪಿಸಿದರೆ, ಸುಬ್ರಹ್ಮಣ್ಯ ಧಾರೇಶ್ವರರು ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News