ಫೈನಾನ್ಸಿಯರ್ ದರೋಡೆ ಪ್ರಕರಣ: ರೌಡಿಶೀಟರ್ ಬಂಧನ

Update: 2019-07-22 15:17 GMT

ಮಂಗಳೂರು, ಜು.22: ಮಳಲಿ ಹಗಲು ದರೋಡೆಯ ಪ್ರಕರಣದ ಆರೋಪಿ, ರೌಡಿಶೀಟರ್‌ನನ್ನು ಉಳಾಯಿಬೆಟ್ಟು ಸಮೀಪ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಸೋಮವಾರ ಯಶಸ್ವಿಯಾಗಿದ್ದಾರೆ.

ಉಳಾಯಿಬೆಟ್ಟು ನಿವಾಸಿ, ರೌಡಿಶೀಟರ್ ಮಹಮ್ಮದ್ ಖಾಲಿದ್ ಯಾನೆ ಕೊಯ (32) ಬಂಧಿತ ಆರೋಪಿ. ದರೊಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಳಾಯಿಬೆಟ್ಟು ಪಟ್ರಕೋಡಿ ನಿವಾಸಿ ಆಶ್ಲೇಷ್(20), ಮುಳೂರು ಗ್ರಾಮ ಕಿನ್ನಿಕಂಬ್ಲ ಮಠದಗುಡ್ಡೆ ನಿವಾಸಿ ಅಬ್ದುಲ್ ಅಝೀಝ್(19), ಗಂಜಿಮಠ ನಾರ್ಲಪದವು ನಿವಾಸಿ ಮುಹಮ್ಮದ್ ಮುಸ್ತಫಾ(23) ಎಂಬರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರಕರಣ ವಿವರ

ಸೆಂಥಿಲ್‌ಕುಮಾರ್ ಎಂಬವರು ಫೈನಾನ್ಸ್ ವ್ಯವಹಾರ ಮಾಡುತ್ತಿದ್ದು, ಪ್ರತಿ ರವಿವಾರ ಕಲೆಕ್ಷನ್ ಮಾಡುತ್ತಿದ್ದರು. ಜು.14ರಂದು ಬೆಳಗ್ಗೆ 10 ಗಂಟೆಗೆ ತನ್ನ ಮನೆಯಾದ ಮರೋಳಿಯಿಂದ ತನ್ನ ಬೈಕ್‌ನಲ್ಲಿ ಪೊಳಲಿ ಅಡ್ಡೂರಿನಿಂದ ಮರಳು ಯಾರ್ಡ್ ರಸ್ತೆಯಲ್ಲಿ ಮಳಲಿ ಸೈಟಿಗೆ ಹೋಗುತ್ತಿದ್ದರು.

ಮಧ್ಯಾಹ್ನ 2:30ಕ್ಕೆ ಮೊಗರು ಮಳಲಿ ಸೈಟ್ ಬಳಿ ಹೋಗುತ್ತಿರುವಾಗ ಎರಡು ಬೈಕ್‌ನಲ್ಲಿ ಬಂದ ನಾಲ್ಕು ಮಂದಿ ಯುವಕರು ಬೈಕಿಗೆ ತಮ್ಮ ಬೈಕನ್ನು ಅಡ್ಡಯಿಟ್ಟು, ‘ನಿನ್ನಲ್ಲಿದ್ದ ಹಣ ಕೊಡು ಇಲ್ಲದಿದ್ದರೆ ಕೊಲ್ಲುತ್ತೇವೆ’ ಎಂದು ತಲವಾರು ತೋರಿಸಿ ಬೆದರಿಸಿದ್ದಾರೆ. ಬಳಿಕ ಬೈಕಿನ ಬಾಕ್ಸನ್ನು ಹೊಡೆದು ಅದರಲ್ಲಿದ್ದ 2.05 ಲಕ್ಷ ರೂ. ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲವು ಪ್ರಕರಣ: ದಡೋಡೆ ಪ್ರಕರಣದ ಪ್ರಮುಖ ರೂವಾರಿ ಗಡಿಪಾರುಗೊಂಡ ಕುಖ್ಯಾತ ಆರೋಪಿ ರೌಡಿಶೀಟರ್ ಮುಹಮ್ಮದ್ ಖಾಲಿದ್ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

ಆರೋಪಿ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ಕು ಕೊಲೆಯತ್ನ ಪ್ರಕರಣ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣ, ಬಜ್ಪೆ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆಯತ್ನ ಪ್ರಕರಣ ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ.

ಆರೋಪಿ ಗಡಿಪಾರು ಗೊಂಡಿದ್ದರೂ ತಲೆಮರೆಸಿಕೊಂಡು ಇತರ ಸಹಚರರೊಂದಿಗೆ ಸೇರಿ ಮಳಲಿಯಲ್ಲಿ ಫೈನಾನ್ಸರ್‌ನನ್ನು ದರೋಡೆ ಮಾಡಿದ್ದ. ಈತನನ್ನು ಸೋಮವಾರ ಬೆಳಗ್ಗೆ ಉಳಾಯಿಬೆಟ್ಟು ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಆರೋಪಿಯಿಂದ 50 ಸಾವಿರ ರೂ. ನಗದು, ಎರಡು ಮೊಬೈಲ್ ಪೋನ್, ತಲವಾರು, ಚೂರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕ ಎಸ್.ಪರಶಿವಮೂರ್ತಿ, ಪಿಎಸ್‌ಐಗಳಾದ ಸತೀಶ್ ಎಂ.ಪಿ., ಕಮಲಾ, ಸಹಾಯಕ ಉಪನಿರೀಕ್ಷಕ ರಾಮಚಂದ್ರ, ಶ್ರೀರಾಮ ಪೂಜಾರಿ, ಜನಾರ್ದನಗೌಡ, ಎಚ್‌ಸಿಗಳಾದ ಚಂದ್ರಮೋಹನ್, ರಾಜೇಶ್, ಸುಧೀರ್ ಶೆಟ್ಟಿ, ಸಂತೋಷ್ ಸುಳ್ಯ, ಪಿಸಿಗಳಾದ ಮಂಜುನಾಥ, ವಿನೋದ್, ತಿರುಪತಿ, ಮುಜಾಂಬಿಲ್, ಮುತ್ತಣ್ಣ, ಹೋಮ್‌ಗಾರ್ಡ್ ಸತೀಶ್ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News